Breaking News

ಧಾರವಾಡ ಲೋಕಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್ ಆಕಾಂಕ್ಷಿತರ ಪಟ್ಟಿ ಹೆಚ್ಚಾಗುತ್ತಿದೆ.

Spread the love

ಧಾರವಾಡ: ವಿಧಾನಸಭೆ ಚುನಾವಣೆ ಮುಗಿದು ಕಾಂಗ್ರೆಸ್ ಅಧಿಕಾರದ ಗದ್ದುಗೆ ಏರಿದೆ.

ಇನ್ನೇನಿದ್ರು ಲೋಕಸಭಾ ಚುನಾವಣೆ ಮೇಲೆ ಎಲ್ಲ ಪಕ್ಷಗಳ ಕಣ್ಣುಗಳು ನೆಟ್ಟಿವೆ. ಜೊತೆಗೆ ಎಲ್ಲ ಪಕ್ಷಗಳಲ್ಲಿಯೂ ಟಿಕೆಟ್​ಗಾಗಿ ಆಕಾಂಕ್ಷಿತರು ಈಗಲೇ ತಮ್ಮ ಇಂಗಿತ ವ್ಯಕ್ತಪಡಿಸುತ್ತಿದ್ದಾರೆ. ಹಾಗೆಯೇ ಧಾರವಾಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್​ಗಾಗಿ ಕೂಡ ಆಕಾಂಕ್ಷಿಗಳು ಬಹಿರಂಗವಾಗಿಯೇ ಸ್ಪರ್ಧಿಸುವ ಆಸೆಯನ್ನು ವ್ಯಕ್ತಪಡಿಸಿದ್ದಾರೆ.

ಈಗಿನಿಂದಲೇ ಸಂಸತ್ ಚುನಾವಣೆಗೆ ಸಿದ್ಧತೆಗಳು ಶುರುವಾಗಿವೆ. ಹೀಗಾಗಿ ಸಹಜವಾಗಿ ಆಕಾಂಕ್ಷಿಗಳು ಮುನ್ನಲೆಗೆ ಬರುತ್ತಿದ್ದಾರೆ. ಧಾರವಾಡ ಲೋಕಸಭಾ ಕ್ಷೇತ್ರದಲ್ಲಿಯೂ ಸ್ಪರ್ಧೆಗಿಳಿಯಲು ಕಾಂಗ್ರೆಸ್​ನಲ್ಲಿ ಸಾಲು ಸಾಲು ಆಕಾಂಕ್ಷಿಗಳ ದಂಡೇ ಇದೆ. ಆದರೆ ಕೇಂದ್ರ ಸಚಿವ ಸಂಪುಟದ ಪ್ರಮುಖ ಸಚಿವ ಸ್ಥಾನದಲ್ಲಿರುವ, ಈ ಕ್ಷೇತ್ರದ ಸಂಸದರೂ ಆಗಿರುವ ಪ್ರಹ್ಲಾದ್ ಜೋಶಿ ವಿರುದ್ಧ ಕಾಂಗ್ರೆಸ್ ಹೈಕಮಾಂಡ್ ಯಾರನ್ನು ಕಣಕ್ಕಿಳಿಸಲಿದೆ ಎನ್ನುವ ಕುತೂಹಲವಿದೆ.

ಆಕಾಂಕ್ಷಿತರ ಪಟ್ಟಿಯಲ್ಲಿ ಯಾರೆಲ್ಲಾ?: ಕಾಂಗ್ರೆಸ್​ನಲ್ಲಿ ಧಾರವಾಡ ಲೋಕಸಭಾ ಟಿಕೆಟ್​ಗಾಗಿ ಆಕಾಂಕ್ಷಿತರಲ್ಲಿ ಪೈಪೋಟಿ ಏರ್ಪಡುವ ಸಾಧ್ಯತೆ ಇದೆ. ಆಕಾಂಕ್ಷಿಗಳಲ್ಲಿ ಮಾಜಿ ಸಚಿವ ವಿನಯ ಕುಲಕರ್ಣಿ ಸಹೋದರ ವಿಜಯ ಕುಲಕರ್ಣಿ, ಮೋಹನ ಲಿಂಬಿಕಾಯಿ, ಅನಿಲ ಕುಮಾರ ಪಾಟೀಲ್, ರಜತ್ ಉಳ್ಳಾಗಡ್ಡಿ ಸೇರಿದಂತೆ ಹಲವು ನಾಯಕರ ಹೆಸರುಗಳು ಮಂಚೂಣಿಯಲ್ಲಿವೆ. ಆದ್ರೆ ಹೈಕಮಾಂಡ್ ಯಾರಿಗೆ ಮಣೆ ಹಾಕುತ್ತೆ ಎಂಬುದನ್ನು ಕಾದು ನೋಡಬೇಕಿದೆ.

ಲೋಕಸಭಾ ಚುನಾವಣೆಗಾಗಿ ಕಾಂಗ್ರೆಸ್ ಈಗಾಗಲೇ ಜಿಲ್ಲಾ ಉಸ್ತುವಾರಿಗಳನ್ನು ನೇಮಿಸಿದೆ. ಅಂತೆಯೇ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಅವರು ಧಾರವಾದ ಉಸ್ತುವಾರಿಯಾಗಿ ನೇಮಕವಾಗಿದ್ದಾರೆ. ಲಿಂಗಾಯತ ಸಮುದಾಯದ ಹೆಬ್ಬಾಳ್ಕರ್ ಅವರನ್ನು ಉಸ್ತುವಾರಿಯಾಗಿ ಮಾಡುವ ಮೂಲಕ ಲಿಂಗಾಯತ ಟ್ರಂಪ್ ಕಾರ್ಡ್ ಬಳಸಲು ಕಾಂಗ್ರೆಸ್ ತಂತ್ರ ಹೆಣೆದಿದೆಯಾ ಎಂಬ ಪ್ರಶ್ನೆ ಜಿಲ್ಲೆಯ ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ.

ಹೆಬ್ಬಾಳ್ಕರ್ ಉಸ್ತುವಾರಿಯಾಗುತ್ತಿದ್ದಂತೆ ಜಿಲ್ಲೆಯ ಲಿಂಗಾಯತ ನಾಯಕರು ನಾವೂ ಸಹ ಲೋಕಸಭಾ ಚುನಾವಣೆಯ ಆಕಾಂಕ್ಷಿ ಅಂತಾ ಚುನಾವಣೆಗೆ ಸ್ಪರ್ಧಿಸುವ ಇಚ್ಛೆಯನ್ನು ಹೊರಹಾಕುತ್ತಿದ್ದಾರೆ. ಆ ಪೈಕಿ ವಿನಯ್​ ಕುಲಕರ್ಣಿ ಸಹೋದರ ವಿಜಯ್​ ಕುಲಕರ್ಣಿ ಹಾಗೂ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯಿಂದ ಕಾಂಗ್ರೆಸ್​​ಗೆ ಬಂದಿರುವ ಮೋಹನ ಲಿಂಬಿಕಾಯಿ ಬಹಿರಂಗವಾಗಿಯೇ ಧಾರವಾಡ ಕ್ಷೇತ್ರದ ಆಕಾಂಕ್ಷಿ ಅಂತಾ ಹೇಳಿಕೊಳ್ಳುತ್ತಿದ್ದಾರೆ.


Spread the love

About Laxminews 24x7

Check Also

ಬಿಜೆಪಿಗೆ ಕಾಂಗ್ರೆಸ್ ಶಾಸಕರನ್ನು ಕಳುಹಿಸಿದ್ದೆ ಸಿಎಂ ಸಿದ್ದರಾಮಯ್ಯ : ಪ್ರಹ್ಲಾದ್ ಜೋಶಿ ಹೊಸ ಬಾಂಬ್!

Spread the love ಧಾರವಾಡ : ಬಿಜೆಪಿ ಆಪರೇಷನ್ ಕಮಲ ಮಾಡಲು ಕಾಂಗ್ರೆಸ್ ಶಾಸಕರಿಗೆ 100 ಕೋಟಿ ಆಫರ್ ನೀಡಿದೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ