Breaking News

ಕಾವೇರಿ ಕಿಚ್ಚು: ಎರಡು ಬಣಗಳ ನಡುವೆ ಮೂಡದ ಒಮ್ಮತ… ನಾಳೆ ಬೆಂಗಳೂರು, ಸೆ.29ಕ್ಕೆ ಕರ್ನಾಟಕ ಬಂದ್

Spread the love

ಬೆಂಗಳೂರು: ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದನ್ನ ಖಂಡಿಸಿ ನಾಳಿನ ಬೆಂಗಳೂರು ಬಂದ್ ಜೊತೆ ಸೆ.29ರಂದು ಕರ್ನಾಟಕ ಬಂದ್ ನಡೆಯಲಿದೆ.

ಈ‌ ಮೂಲಕ ಕನ್ನಡ ಹಾಗೂ ರೈತಪರ ಸಂಘಟನೆಗಳು ಸೇರಿ ವಿವಿಧ ಸಂಘ ಸಂಸ್ಥೆಗಳು ಒಂದೇ ವಾರದಲ್ಲಿ ಎರಡು ಬಂದ್ ಮೂಲಕ ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರಲಿವೆ.

ಕಾವೇರಿ ಕಣಿವೆಯಲ್ಲಿ ಮಳೆ ಕೊರತೆ ಹಿನ್ನೆಲೆಯಲ್ಲಿ ಕೆಆರ್​​ಎಸ್ ಜಲಾಶಯ ಸೇರಿ ವಿವಿಧ ಡ್ಯಾಂಗಳಲ್ಲಿ ನೀರು ಬರಿದಾಗಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ತಮಿಳುನಾಡಿಗೆ ನೀರು ಹರಿಸಿರುವ ರಾಜ್ಯ ಸರ್ಕಾರ ಧೋರಣೆ ಖಂಡನೀಯ. ಕೂಡಲೇ ನೀರು ನಿಲ್ಲಿಸಿ ರಾಜ್ಯ ರೈತರ ಹಿತ ಕಾಪಾಡಲು ಒತ್ತಾಯಿಸಿ ಕಬ್ಬು ಬೆಳೆಗಾರರ ಸಂಘಟನೆ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಸೇರಿದಂತೆ ವಿವಿಧ ಸಂಘಟೆಗಳು ನಾಳೆ ಬೆಂಗಳೂರು ಬಂದ್​​ಗೆ ಕರೆ ಕೊಟ್ಟಿದ್ದರು.‌

ಮತ್ತೊಂದೆಡೆ ಕನ್ನಡ ಒಕ್ಕೂಟ ಅಧ್ಯಕ್ಷ ವಾಟಾಳ್ ನಾಗರಾಜ್ ಅವರು ಕಾವೇರಿ ನೀರಿಗಾಗಿ ಒತ್ತಾಯಿಸಿ ಸೆ.29ರಂದು ಬಂದ್ ಕರೆ ಕೊಟ್ಟಿದ್ದರು. ಒಂದೇ ವಾರದಲ್ಲಿ ಎರಡು ಬಂದ್ ನಡೆಯುವ ಹಿನ್ನೆಲೆಯಲ್ಲಿ ಕುರುಬೂರು ಶಾಂತಕುಮಾರ್ ಅವರು ನಾಳಿನ ಬಂದ್​​ಗೆ ಬೆಂಬಲಿಸಬೇಕೆಂದು ಮನವಿ ಮಾಡಿದ್ದರು.‌ ಇಂದಿನ ಸಭೆಯಲ್ಲಿ ತೀರ್ಮಾನ ಮಾಡೋಣ ಎಂದು ವಾಟಾಳ್ ಭರವಸೆ‌ ನೀಡಿದ್ದರು. ಇದರಂತೆ ಇಂದು ಕನ್ನಡ ಹಾಗೂ‌ ರೈತಪರ ಸಂಘಟನೆಗಳ‌ ನಡುವೆ ನಗರದ ಖಾಸಗಿ ಹೊಟೇಲ್​​ನಲ್ಲಿ ಸಭೆ ನಡೆಯಿತು. ಸಭೆಯಲ್ಲಿ‌ ಎರಡು ಬಣಗಳ ನಡುವೆ ಒಮ್ಮತ ಮೂಡದ ಹಿನ್ನೆಲೆಯಲ್ಲಿ ಬೆಂಗಳೂರು ಬಂದ್ ಜೊತೆ ಕರ್ನಾಟಕ ಬಂದ್ ನಡೆಯುವುದು ನಿಶ್ಚಿತವಾಗಿದೆ.

ಸಭೆ ವಿಫಲವಾದ ಬಳಿಕ ಹೊರಬಂದು ಮಾತನಾಡಿದ ಕುರುಬೂರು ಶಾಂತಕುಮಾರ್, ನಾಳೆ ಬೆಂಗಳೂರು ಬಂದ್​​ಗೆ ಬೆಂಬಲಿಸಿ ಎಂದು ಮನವಿ ಮಾಡಿಕೊಂಡಿದ್ದೇನೆ. ಇಲ್ಲಿ ಆಗಮಿಸಿರುವ 50ಕ್ಕೂ ಹೆಚ್ಚು ಸಂಘಟನೆಗಳಿಗೆ ಮನವಿ ಮಾಡಿದ್ದೇನೆ. ಈ ಬಗ್ಗೆ ವಾಟಾಳ್ ಸಭೆ ಬಳಿಕ ನಿರ್ಧಾರ ಕೈಗೊಳ್ತೇನೆ ಎಂದಿದ್ದಾರೆ. ನಾವು ಮೊದಲೇ ಬೆಂಗಳೂರು ಬಂದ್ ಕರೆ ಕೊಟ್ಟಿದ್ದೇವೆ. ನಾವು ಕರ್ನಾಟಕ ಬಂದ್ ಬೆಂಬಲಿಸುವ ಕುರಿತು ನಂತರ ನಿರ್ಧಾರ ತೆಗೆದುಕೊಳ್ಳುತ್ತೇವೆ. ವಾಟಾಳ್ ನಿರ್ಧಾರ ಏನು ಅಂತ ನೀವೇ ಅವರನ್ನು ಕೇಳಬೇಕು. ನಾವಂತೂ ನಾಳೆ ಬೆಂಗಳೂರು ಬಂದ್ ಮಾಡುತ್ತೇವೆ. ನೂರಕ್ಕೂ ಹೆಚ್ಚು ಸಂಘಟನೆಗಳು ಬಂದ್​ಗೆ ಬೆಂಬಲಿಸಿವೆ ಎಂದು ಮಾಹಿತಿ ನೀಡಿದ್ದಾರೆ.

ಸಭೆ ಬಳಿಕ ಮಾತನಾಡಿದ ವಾಟಾಳ್ ನಾಗರಾಜ್, ಕಾವೇರಿ, ಕೃಷ್ಣಾ ಸೇರಿದಂತೆ ರಾಜ್ಯದ ಎಲ್ಲಾ‌ ನೀರಾವರಿ ಯೋಜನೆಗಳಿಗಾಗಿ ಆಗ್ರಹಿಸಿ ಸೆ.29ರಂದು ಅಖಂಡ ಕರ್ನಾಟಕ ಬಂದ್​​ಗೆ ಕರೆ ಕೊಡಲಾಗಿದೆ. ಬಂದ್​ಗೆ ಬಹುತೇಕ ಸಂಘ-ಸಂಸ್ಥೆಗಳು ಬೆಂಬಲಿಸಿವೆ. ಸೆ.29ರಂದು ಟೌನ್ ಹಾಲ್​​ನಿಂದ ಫ್ರೀಡಂಪಾರ್ಕ್ ವರೆಗೂ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಯಲಿದೆ ಎಂದರು.

 ರೈತ ಮತ್ತು ಕನ್ನಡ ಪರ ಸಂಘಟನೆಗಳ ನಡುವೆ ಸಭೆಕನ್ನಡಪರ ಮುಖಂಡ ಪ್ರವೀಣ್ ಶೆಟ್ಟಿ ಮಾತನಾಡಿ, ವಾಟಾಳ್ ನಾಗರಾಜ್ ಅವರು ಕರೆ ನೀಡಲಾಗಿರುವ ಕರ್ನಾಟಕ ಬಂದ್​ಗೆ ನಮ್ಮ ಬೆಂಬಲವಿದೆ. ಬಂದ್​ಗೆ ಕರೆ ಕೊಡುವಾಗ ಆಮ್ ಆದ್ಮಿ ಪಕ್ಷ ಯಾಕೆ ಬಂತು? ನಾವು ಅನೇಕ ವರ್ಷಗಳಿಂದ ಪೊಲೀಸರ ಲಾಠಿ ಏಟು ತಿಂದು ಹೋರಾಟ ಮಾಡಿದವರು. ಎರಡು ಬಂದ್ ಬೇಡ ಅಂತ ‌ಮನವಿ ಮಾಡಿದ್ದೀವಿ. ಆದರೆ ಅವರು ಅವರ ಅಸ್ತಿತ್ವ ಉಳಿಸಿಕೊಳ್ಳಲು ಸಿದ್ಧರಿಲ್ಲ. ಸಪ್ಟೆಂಬರ್ 29 ಕ್ಕೆ ನಮ್ಮ ಬೆಂಬಲವಿದೆ ಎಂದರು.

ರಾಜ್ಯ ರೈತ ಸಂಘದ ಅಧ್ಯಕ್ಷ‌ ಬಡಗಲಪುರ ನಾಗೇಂದ್ರ ಮಾತನಾಡಿ ಕಾವೇರಿ ವಿಚಾರದಲ್ಲಿ ಅನ್ಯಾಯ‌ ಮುಂದುವರೆದಿದೆ. ಕರ್ನಾಟಕದ ಪರಿಸ್ಥಿತಿ ಚಳವಳಿ ಒಂದು‌ ಕೂಗು ಆಗಬೇಕು. ಸಪ್ಟೆಂಬರ್ 29 ಕ್ಕೆ ಕರ್ನಾಟಕ ಬಂದ್​​ಗೆ ವಾಟಾಳ್ ನಾಗರಾಜ್ ಕರೆ ನೀಡಿದ್ದಾರೆ. ಇದಕ್ಕೆ ರಾಜ್ಯ ರೈತ ಸಂಘ ಬೆಂಬಲ ನೀಡಲಿದೆ ಎಂದು ತಿಳಿಸಿದರು.

ಬಂದ್‌ಗೆ ವಕೀಲರ ಸಂಘ ಬೆಂಬಲ: ಕಾವೇರಿ ನದಿ ನೀರು ವಿಚಾರ ಸಂಬಂಧ ಕನ್ನಡಪರ ಸಂಘಟನೆಗಳು ಹಾಗೂ ವಿವಿಧ ಸಂಘಟನೆಗಳ ಕರೆದಿರುವ ಬೆಂಗಳೂರು ಬಂದ್‌ಗೆ ವಕೀಲರ ಸಂಘ ಕೂಡ ಬೆಂಬಲ ವ್ಯಕ್ತಪಡಿಸಿದೆ. ಈ ಕುರಿತುಂತೆ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ವಿವೇಶಕ್ ಸುಬ್ಬಾರೆಡ್ಡಿ, ಕಾವೇರಿ ಸಮಸ್ಯೆ ಬೆಂಗಳೂರು ನಗರ ಸೇರಿದಂತೆ ಕಾವೇರಿ ನದಿ ಜಲಾನಯನ ಪ್ರದೇಶಗಳಿಗೆ ತೀವ್ರ ತೊಂದರೆಯನ್ನು ನೀಡಲಿದೆ. ರಾಜ್ಯದ ಜನರಿಗೆ ಕುಡಿಯುವುದಕ್ಕೆ ನೀರು ಇಲ್ಲದ ಸಂದರ್ಭದಲ್ಲಿಯೂ ನೀರು ಹರಿಸುವಂತೆ ತಮಿಳುನಾಡು ರಾಜ್ಯದ ಬೇಡಿಕೆ ದುರದೃಷ್ಟಕರವಾಗಿದೆ. ಇದೊಂದು ಒತ್ತಡದ ಕ್ರಮವಾಗಿದೆ. ಈ ಬೆಳವಣಿಗೆ ಮುಂದಿನ ತಿಂಗಳುಗಳಲ್ಲಿ ಬೆಂಗಳೂರು ಮತ್ತು ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ನೀರಿನ ತೀವ್ರ ಕೊರತೆ ಉಂಟಾಗಲಿದ್ದು, ಬೆಂಗಳೂರಿನ ರೈತರು ಮತ್ತು ನಾಗರಿಕರಿಗೆ ತೊಂದರೆಯಾಗಲಿದೆ. ಜತೆಗೆ, ವಿಶ್ವ ಆರ್ಥಿಕ ಕೇಂದ್ರವಾಗಿರುವ ಬೆಂಗಳೂರು ಮುಂಬರುವ ದಿನಗಳಲ್ಲಿ ನೀರಿಲ್ಲದೆ ಸಂಕಷ್ಟ ಎದುರಿಸಬೇಕಾಗುವ ಅಪಾಯವಿದೆ. ಆದ್ದರಿಂದ ರಾಜ್ಯ ಬಂದ್​ಗೆ ಬೆಂಗಳೂರು ವಕೀಲರ ಸಂಘ ಬೆಂಬಲ ನೀಡುತ್ತಿದೆ ಎಂದು ಅವರು ಪ್ರಕಟಣೆಯಲ್ಲಿ ವಿವರಿಸಿದ್ದಾರೆ.


Spread the love

About Laxminews 24x7

Check Also

ಹಾವೇರಿ: ಶರಣ ಚೌಡಯ್ಯ ಐಕ್ಯ ಮಂಟಪಕ್ಕೆ ಜಲದಿಗ್ಬಂಧನ, ತೆಪ್ಪದಲ್ಲಿ ತೆರಳಿ ಭಕ್ತರಿಂದ ಪೂಜೆ

Spread the loveಹಾವೇರಿ: ಸಂತರ, ಶರಣರ ಮತ್ತು ದಾರ್ಶನಿಕರ ಜಿಲ್ಲೆ ಹಾವೇರಿ. ಇಲ್ಲಿ ಸರ್ವಜ್ಞ, ಅಂಬಿಗರ ಚೌಡಯ್ಯ, ಕನಕದಾಸರು, ಶಿಶುನಾಳ ಶರೀಫರು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ