ಕಾರವಾರ: ಉತ್ತರಕನ್ನಡ ಜಿಲ್ಲೆಯಲ್ಲಿ ಡೆಂಗ್ಯೂ, ಮಲೇರಿಯಾ ಜೊತೆಗೆ ಇಲಿ ಜ್ವರವೂ ಜನರಲ್ಲಿ ತೀವ್ರಗತಿಯಲ್ಲಿ ಹರಡುತ್ತಿದೆ. ಕೆಲವೇ ದಿನಗಳಲ್ಲಿ ಸುಮಾರು 34 ಜನರಲ್ಲಿ ಕಾಣಿಸಿಕೊಂಡಿರುವ ಇಲಿ ಜ್ವರ ಜಿಲ್ಲೆಯಲ್ಲಿ ಆತಂಕ ಸೃಷ್ಟಿಸಿದೆ. ಇಲಿ ಜ್ವರದ ಬಗ್ಗೆ ಸಕಾಲದಲ್ಲಿ ಆರೋಗ್ಯ ಇಲಾಖೆ ಜಾಗೃತಿ ಮೂಡಿಸದೆ ಇದ್ದಿದ್ದರಿಂದ ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಾಗಿದೆ ಎಂದು ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈ ಕುರಿತು ಒಂದು ವರದಿ ಇಲ್ಲಿದೆ.
ಉತ್ತರಕನ್ನಡ ಜಿಲ್ಲಾದ್ಯಂತ ಕಳೆದ ಎರಡು ತಿಂಗಳಿನಿಂದ ಜ್ವರದ ಪ್ರಕರಣಗಳು ಹೆಚ್ಚಾಗುತ್ತಿವೆ. ಬಹುತೇಕ ಆಸ್ಪತ್ರೆಗಳಲ್ಲಿ ಇಲಿ ಜ್ವರದಿಂದ ಬಳಲುತ್ತಿರುವವರ ಸಂಖ್ಯೆ ಹೆಚ್ಚಾಗಿದೆ. ಒಂದು ಕಡೆ ಡೆಂಗ್ಯೂ, ಮಲೇರಿಯಾದಂತಹ ಪ್ರಕರಣಗಳು ಆತಂಕ ಮೂಡಿಸಿದರೆ, ಇದೀಗ ಇಲಿ ಜ್ವರದಂತಹ ಗಂಭೀರ ಪ್ರಕರಣಗಳು ಪತ್ತೆಯಾಗುತ್ತಿರುವುದು ಜನರಲ್ಲಿ ಮತ್ತಷ್ಟು ಭಯ ಹುಟ್ಟುವಂತೆ ಮಾಡಿದೆ.
ಸದ್ಯ ಜಿಲ್ಲೆಯಲ್ಲಿ ಸುಮಾರು 34 ಇಲಿ ಜ್ವರ ಪ್ರಕರಣಗಳು ಪತ್ತೆಯಾಗಿವೆ. ಅದರಲ್ಲಿ ಅಂಕೋಲಾದಲ್ಲಿ 1, ಭಟ್ಕಳ 3, ಹೊನ್ನಾವರ 8, ಜೋಯಿಡಾ 1, ಕಾರವಾರದಲ್ಲಿ 8, ಕುಮಟಾ 7, ಶಿರಸಿ 3, ಸಿದ್ದಾಪುರದಲ್ಲಿ 3 ಪ್ರಕರಣಗಳು ಕಂಡುಬಂದಿವೆ.
ಇಲಿ ಜ್ವರ ಬರಲು ಕಾರಣವೇನು, ವೈದ್ಯರು ಏನಂತಾರೆ?
ಇನ್ನು ಈ ಕಾಯಿಲೆ ಹರಡಲು ಪ್ರಮುಖವಾಗಿ ಇಲಿ ಮೂತ್ರದಿಂದ ಲೆಪ್ಟೊಸ್ಪಿರೋಸಿಸ್ ಹೊರಬಂದಾಗ ಅದು ಕುಡಿಯುವ ನೀರು ಅಥವಾ ಆಹಾರ ಪದಾರ್ಥಗಳ ಜೊತೆ ಸೇರಿದಾಗ ಅದು ಕಲುಷಿತಗೊಳ್ಳುತ್ತದೆ. ಒಂದು ವೇಳೆ ಅದನ್ನು ಮನುಷ್ಯ ಸೇವನೆ ಮಾಡಿದ್ರೆ ವೈರಸ್ ಅಟ್ಯಾಕ್ ಆಗಿ ಇಲಿ ಜ್ವರಕ್ಕೆ ತುತ್ತಾಗುತ್ತಾನೆ. ಇನ್ನೂ ಇಲಿ ಜ್ವರದ ಪ್ರಮುಖ ಲಕ್ಷಣಗಳು ಅಂದರೆ ಅತಿಯಾದ ಜ್ವರ, ಮೈ ಕೈ ನೋವು, ರಕ್ತ ಸ್ರಾವ, ಮೂಗು-ಬಾಯಿಗಳಲ್ಲಿ ರಕ್ತಸ್ರಾವವಾಗಲಿದೆ. ಅಲ್ಲದೇ 20 ದಿನಗಳಾದರೂ ಜ್ವರ ಕಡಿಮೆಯಾಗಲ್ಲ. ಇನ್ನು ಇಂತಹ ಲಕ್ಷಣಗಳು ಕಂಡು ಬಂದರೆ ತಕ್ಷಣ ವೈದ್ಯಕೀಯ ಪರೀಕ್ಷೆ ಮಾಡಿಸುವ ಮೂಲಕ ಚಿಕಿತ್ಸೆ ಪಡೆಯಬೇಕು ಎಂದು ಡಿಎಚ್‌ಒ ಡಾ ನೀರಜ್ ಬಿ.ವಿ ಮಾಹಿತಿ ನೀಡಿದ್ದಾರೆ.
ಇನ್ನು ಮನಷ್ಯನಲ್ಲಿ ಎರಡನೇ ಬಾರಿ ಇಲಿ ಜ್ವರ ಪತ್ತೆಯಾದರೆ ಅದು ತೀವ್ರ ಸ್ವರೂಪ ಪಡೆದುಕೊಳ್ಳುವ ಸಾಧ್ಯತೆ ಇರುತ್ತದೆ. ಇದರಿಂದ ಲಿವರ್ ಡ್ಯಾಮೇಜ್, ಜಾಂಡೀಸ್, ಕಿಡ್ನಿ ವೈಫಲ್ಯ, ಮೆದಳು ಜ್ವರ ಬಂದು ಮನುಷ್ಯನ ಜೀವಕ್ಕೆ ಅಪಾಯ ಉಂಟಾಗುವ ಸಾಧ್ಯತೆ ಹೆಚ್ಚಿರುತ್ತದೆ. ಹೀಗಾಗಿ ಜನರು ಸಣ್ಣ ಜ್ವರವೆಂದು ನಿರ್ಲಕ್ಷ್ಯ ಮಾಡದೆ, ವೈದ್ಯರ ಬಳಿ ಹೋಗಿ ರಕ್ತ ಪರೀಕ್ಷೆ ಮಾಡಿಸಬೇಕು. ಸೂಕ್ತ ಚಿಕಿತ್ಸೆ ಪಡೆದುಕೊಳ್ಳಬೇಕು ಎಂದು ವೈದ್ಯರು ಸಲಹೆ ನೀಡಿದ್ದಾರೆ.