ಬೆಂಗಳೂರು: ವಿಶ್ವಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಸಂಸ್ಥೆ (ಯುನೆಸ್ಕೋ)ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಕರುನಾಡಿನ ಪ್ರಸಿದ್ಧ ಹೊಯ್ಸಳರ ಕಾಲದ ದೇವಾಲಯಗಳು ಸೇರ್ಪಡೆಗೊಂಡಿರುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಹರ್ಷ ವ್ಯಕ್ತಪಡಿಸಿದ್ದಾರೆ.
ವಿಶ್ವಮಟ್ಟದ ಮೂಲಸೌಲಭ್ಯ, ಸುರಕ್ಷತೆ ಒದಗಿಸಲು ಬದ್ಧ: ಈ ಸಂಬಂಧ ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಸಿಎಂ, “ಇದು ಖುಷಿ, ಹೆಮ್ಮೆಯ ಸಂಗತಿ. ನಾಡಿನ ಪ್ರವಾಸಿ ತಾಣಗಳಿಗೆ ಭೇಟಿ ನೀಡುವ ಪ್ರವಾಸಿಗರಿಗೆ ವಿಶ್ವಮಟ್ಟದ ಮೂಲಸೌಲಭ್ಯ ಮತ್ತು ಸುರಕ್ಷತೆ ಒದಗಿಸಲು ನಮ್ಮ ಸರ್ಕಾರ ಕಾರ್ಯಪ್ರವೃತ್ತವಾಗಿದೆ. ಐತಿಹಾಸಿಕ ಸ್ಥಳಗಳು ಮತ್ತು ಪುಣ್ಯಕ್ಷೇತ್ರಗಳ ತೊಟ್ಟಿಲು ಕರ್ನಾಟಕಕ್ಕೆ ಸ್ವಾಗತ” ಎಂದಿದ್ದಾರೆ.
ಅಸಾಧಾರಣ ಶಿಲ್ಪ ಕೌಶಲ್ಯಕ್ಕೆ ಸಾಕ್ಷಿ: ಪ್ರಧಾನಿ ಮೋದಿ ಕೂಡ ಸಂತಸ ವ್ಯಕ್ತಪಡಿಸಿದ್ದಾರೆ. “ಹೊಯ್ಸಳರ ಭವ್ಯ ಮತ್ತು ಪವಿತ್ರ ಶಿಲ್ಪ ಸಂಕೀರ್ಣಗಳನ್ನು ಯುನೆಸ್ಕೋ ವಿಶ್ವ ಪಾರಂಪರಿಕ ಸ್ಥಳಗಳ ಪಟ್ಟಿಯಲ್ಲಿ ಸೇರಿಸಲಾಗಿದೆ. ಹೊಯ್ಸಳ ದೇವಾಲಯಗಳ ಕಾಲಾತೀತ ಸೌಂದರ್ಯ ಮತ್ತು ಸೂಕ್ಷ್ಮ ಕುಸುರಿ ಕೆಲಸಗಳು ಭಾರತದ ಶ್ರೀಮಂತ ಸಾಂಸ್ಕೃತಿಕ ಪರಂಪರೆ ಮತ್ತು ನಮ್ಮ ಪೂರ್ವಿಕರ ಅಸಾಧಾರಣ ಶಿಲ್ಪ ಕೌಶಲ್ಯಕ್ಕೆ ಸಾಕ್ಷಿಯಾಗಿದೆ” ಎಂದು ಅಭಿನಂದಿಸಿ ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ರಾಜ್ಯದ ವಿಶ್ವ ಪಾರಂಪರಿಕ ತಾಣಗಳು ಯಾವುವು?: ಕರ್ನಾಟಕದಲ್ಲಿ ಈಗಾಗಲೇ 5 ತಾಣಗಳು ಯುನೆಸ್ಕೋ ವಿಶ್ವಪರಂಪರೆಯ ಪಟ್ಟಿಗೆ ಸೇರ್ಪಡೆಯಾಗಿವೆ. ಹಂಪಿ, ಪಟ್ಟದಕಲ್ಲು-ಬಾದಾಮಿ-ಐಹೊಳೆ, ಬೀದರ್-ಬಿಜಾಪುರ- ಗುಲ್ಬರ್ಗಾದ ಸ್ಮಾರಕಗಳು, ಶ್ರೀರಂಗಪಟ್ಟಣದ ಸ್ಮಾರಕಗಳು, ಬೇಲೂರು ಹಾಗೂ ಹಳೇಬೀಡು ಯುನೆಸ್ಕೋ ವಿಶ್ವಪರಂಪರೆ ಪಟ್ಟಿಗೆ ಸೇರಿ ಸ್ಮಾರಕಗಳಾಗಿವೆ.
ಭಾರತದ 42 ತಾಣಗಳಿಗೆ ಅಂತರರಾಷ್ಟ್ರೀಯ ಮನ್ನಣೆ: ಬೇಲೂರಿನ ಚೆನ್ನಕೇಶವ ದೇವಾಲಯ, ಹಳೇಬೀಡು, ಮೈಸೂರಿನ ಸೋಮಾನಾಥಪುರದಲ್ಲಿರುವ ಹೊಯ್ಸಳರ ದೇವಾಲಯಗಳಿಗೆ ಈ ಗರಿಮೆ ಸಿಕ್ಕಿದೆ. ಈ ಮೂಲಕ ಭಾರತದ 42 ತಾಣಗಳು ಅಂತರರಾಷ್ಟ್ರೀಯ ಮನ್ನಣೆ ಪಡೆದಂತಾಗಿದೆ.