ಕೊಲಂಬೊ (ಶ್ರೀಲಂಕಾ): ಯುವ ಆಟಗಾರ ಶುಭಮನ್ ಗಿಲ್ ಶತಕದ ಹೊರತಾಗಿಯೂ ಭಾರತ ತಂಡ ಬಾಂಗ್ಲಾದೇಶ ವಿರುದ್ದದ ಪಂದ್ಯದಲ್ಲಿ ಮುಗ್ಗಿಸಿದೆ.
ಪ್ರಿನ್ಸ್ ಗಿಲ್ ಶತಕವು ತಂಡದ ಜಯಕ್ಕೆ ಕೊಡುಗೆ ಆಗಲಿಲ್ಲ, ಅವರ ಆಟ ವ್ಯರ್ಥ ಪ್ರಯತ್ನದಂತಾಯಿತು. ಭಾರತ 49.5 ಓವರ್ಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 259 ರನ್ ಗಳಿಸಲಷ್ಟೇ ಶಕ್ತವಾಯಿತು. ಇದರಿಂದ ಬಾಂಗ್ಲಾ ಆರು ರನ್ಗಳ ಗೆಲುವು ದಾಖಲಿಸಿತು.
ಏಷ್ಯಾ ಕಪ್ ಟೂರ್ನಿಯ ಆರನೇ ಸೂಪರ್ 4 ಪಂದ್ಯದಲ್ಲಿ ಐದು ಬದಲಾವಣೆಗಳೊಂದಿಗೆ ಮೈದಾನಕ್ಕಿಳಿದ ಟೀಂ ಇಂಡಿಯಾ ಪ್ರಯೋಗದ ಬಾಂಗ್ಲಾದೇಶದ ಮೇಲೆ ಯಶಸ್ವಿ ಆಗಲಿಲ್ಲ. ಬಾಂಗ್ಲಾ ಕೊಟ್ಟಿದ್ದ 266 ರನ್ ಬೆನ್ನುತ್ತಿದ ಭಾರತಕ್ಕೆ ನಾಯಕ ರೋಹಿತ್ ಶರ್ಮಾ ಅವರ ವಿಕೆಟ್ನಿಂದ ಆರಂಭಿಕ ಆಘಾತ ಉಂಟಾಯಿತು. ಎರಡು ಬಾಲ್ ಎದುರಿಸಿದ ರೋಹಿತ್ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು. ಇದರ ಬೆನ್ನಲ್ಲೇ ಏಕದಿನ ಕ್ರಿಕೆಟ್ಗೆ ಇಂದು ಪಾದಾರ್ಪಣೆ ಮಾಡಿದ ತಿಲಕ್ ವರ್ಮಾ ಕೇವಲ 5 ರನ್ ಗಳಿಸಿ ನಿರಾಸೆ ಮೂಡಿಸಿದರು.
ಮೂರನೇ ವಿಕೆಟ್ಗೆ ಕೆ ಎಲ್ ರಾಹುಲ್ ಹಾಗೂ ಆರಂಭಿಕ ಆಟಗಾರ ಶುಭಮನ್ ಗಿಲ್ 57 ರನ್ಗಳ ಜೊತೆಯಾಟದೊಂದಿಗೆ ತಂಡ ಚೇತರಿಸಿಕೊಂಡಿತು. ಆದರೆ, 19 ರನ್ ಗಳಿಸಿ ಆಡುತ್ತಿದ ರಾಹುಲ್ ಅವರು ಮೆಹದಿ ಹಸನ್ ಬೌಲಿಂಗ್ನಲ್ಲಿ ಪೆವಿಲಿಯನ್ ಸೇರಿಕೊಂಡರು. ನಂತರ ಬಂದ ಇಶಾನ್ ಕಿಶನ್ ಕೂಡ 5 ರನ್ಗೆ ಎಲ್ಬಿ ಬಲೆಗೆ ಬಿದ್ದರು. 5ನೇ ವಿಕೆಟ್ಗೆ ಸೂರ್ಯಕುಮಾರ್ ಯಾದವ್ ಗಿಲ್ಗೆ ಜೊತೆಯಾದರು. ಆದರೆ ಟಿ20ಯ ಟಾಪ್ ಬ್ಯಾಟರ್ ಸೂರ್ಯ (26) ಏಕದಿನ ಕ್ರಿಕೆಟ್ನಲ್ಲಿ ದೊಡ್ಡ ಇನ್ನಿಂಗ್ಸ್ ಕಟ್ಟುವಲ್ಲಿ ಮತ್ತೆ ವಿಫಲರಾದರು. ಮತ್ತೊಂದಡೆ, ರವೀಂದ್ರ ಜಡೇಜಾ ಕೂಡ ಕೇವಲ 7 ರನ್ಗೆ ವಿಕೆಟ್ ಒಪ್ಪಿಸಿದರು.
ಗಿಲ್ ಶತಕ: ಒಂದೆಡೆ ವಿಕೆಟ್ ಕಳೆದುಕೊಳ್ಳುತ್ತಿದ್ದರೂ ಗಿಲ್ ತಾಳ್ಮೆಯಿಂದ ರನ್ ಕಲೆಹಾಕಿದರು. ಎದರುರಾಳಿ ತಂಡದ ಬೌಲರ್ಗಳನ್ನು ಸೂಕ್ಷ್ಮವಾಗಿ ಗಮನಿಸಿ ಬ್ಯಾಟಿಂಗ್ ಮಾಡಿದ ಗಿಲ್ ಸಿಕ್ಕ ಅವಕಾಶದಲ್ಲಿ ಬೌಂಡರಿಗಳ ಸಿಡಿಸುತ್ತಾ ರನ್ಗಳನ್ನು ಕಲೆ ಹಾಕಿದರು. 24ರ ಹರೆಯದ ಆಟಗಾರ 117 ಎಸೆತಗಳಲ್ಲಿ ನೂರರ ಗಡಿ ದಾಟಿದರು. ಈ ಮೂಲಕ ಗಿಲ್ ತಮ್ಮ 5ನೇ ಏಕದಿನ ಶತಕ ಪೂರೈಸಿದರು.