ಬೆಳಗಾವಿ: ಬಸವ ಧರ್ಮ ಎಲ್ಲರನ್ನು ಪ್ರೀತಿಸುವ, ಅಪ್ಪಿಕೊಳ್ಳುವ, ಸಕಲ ಜೀವಾತ್ಮರಿಗೂ ಲೇಸನ್ನೇ ಬಯಸುವ ಧರ್ಮ. ಜಾತಿ, ಮತ, ಪಂಥ, ವರ್ಣ, ವರ್ಗ, ಲಿಂಗ ಭೇದವನ್ನು ತೊಡೆದು ಹಾಕಿದ ವಿಶಿಷ್ಠ ಧರ್ಮ ಎಂದು ಗದಗಡಂಬಳದ ತೋಂಟದಾರ್ಯ ಮಠದ ಡಾ.
ತೋಂಟದ ಸಿದ್ಧರಾಮ ಸ್ವಾಮೀಜಿ ಅಭಿಪ್ರಾಯ ಪಟ್ಟರು.
ಜಾಗತಿಕ ಲಿಂಗಾಯತ ಮಹಾಸಭೆ ಜಿಲ್ಲಾ ಘಟಕದಿಂದ, ಬೆಳಗಾವಿಯಲ್ಲಿ ಶ್ರಾವಣ ಮಾಸದ ನಿಮಿತ್ತ ಒಂದು ತಿಂಗಳು ಹಮ್ಮಿಕೊಂಡಿದ್ದ ಜನಜಾಗೃತಿ ಪಾದಯಾತ್ರೆ ಮತ್ತು ರುದ್ರಾಕ್ಷಿಧಾರಣ ಕಾರ್ಯಕ್ರಮದ ಸಮಾರೋಪ ಸಮಾರಂಭ ನಾಗನೂರು ರುದ್ರಾಕ್ಷಿ ಮಠದಲ್ಲಿ ಆಯೋಜಿಸಲಾಗಿತ್ತು. ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಸಾಮಾಜಿಕ ಅನಿಷ್ಠಗಳಿಂದ ಸಮಾಜವನ್ನು ಮುಕ್ತಗೊಳಿಸಲು ಬಸವ ಧರ್ಮವೊಂದೇ ಪರಿಹಾರ. ಸರ್ವರನ್ನೂ ಸಮಾನವಾಗಿ ಕಂಡು, ಪ್ರೀತಿಸಿದರೆ ಅಸಮಾನತೆ, ಸಂಘರ್ಷ, ಶೋಷಣೆಗಳಿಂದ ಸಮಾಜ ಮುಕ್ತವಾಗಲು ಸಾಧ್ಯ.
ಹೆಣ್ಣು ಗಂಡು ಎನ್ನುವ ಬೇಧವಿಲ್ಲದೇ ಎಲ್ಲರಿಗೂ ಧಾರ್ಮಿಕ ಸ್ವಾತಂತ್ರ್ಯ ಕೊಟ್ಟಿದ್ದು ಬಸವಾದಿ ಶರಣರು. ಲಿಂಗಾಯತ ಧರ್ಮದಲ್ಲಿ ಕಾಯಕ ಮಾಡುವ ಒಳಪಂಗಡಗಳು ಇವೆ ಹೊರತು, ಜಾತಿಗಳಿಲ್ಲ. ಇದೊಂದು ವೈಶಿಷ್ಟ್ಯಪೂರ್ಣ ಧರ್ಮವಾಗಿದ್ದು, ಬಸವಾದಿ ಶರಣರ ಸಂದೇಶಗಳನ್ನು ಮನೆ ಮನಗಳಿಗೆ ತಲುಪಿಸುತ್ತಿರುವ ಜಾಗತಿಕ ಲಿಂಗಾಯತ ಮಹಾಸಭೆ ಕಾರ್ಯ ಶ್ಲಾಘನೀಯ ಎಂದು ಡಾ. ತೋಂಟದ ಸಿದ್ಧರಾಮ ಸ್ವಾಮೀಜಿ ಹೇಳಿದರು.