ಚಿತ್ರದುರ್ಗ : ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ಬಸಾಪುರದ ಬಾಲಕನೊಬ್ಬ ಶಾಲೆಗೆ ಹೋಗದೇ ಕುರಿ ಕಾಯುತ್ತಿದ್ದ ಬಗ್ಗೆ ಮಾಹಿತಿ ಪಡೆದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆ ಬಾಲಕನನ್ನು ಮತ್ತೆ ಶಾಲೆಗೆ ಸೇರಲು ನೆರವಾಗಿದ್ದಾರೆ.
ಬಸಾಪುರ ಗ್ರಾಮದ ಯೋಗೇಶ್ ಎಂಬ ಬಾಲಕನನ್ನು ಮರಳಿ ಶಾಲೆಗೆ ಸೇರಿಸಲಾಗಿದೆ. ಈತನನ್ನು ತಂದೆ ತಾಯಿ ಒತ್ತಾಯಪೂರ್ವಕವಾಗಿ ಶಾಲೆ ಬಿಡಿಸಿ ಕಳೆದ 2 ವರ್ಷದಿಂದ ಕುರಿ ಮೇಯಿಸಲು ಕಳುಹಿಸಿದ್ದರು.
ಈ ಬಗ್ಗೆ ಸ್ಥಳೀಯರಾದ ಮಹೇಂದ್ರ ಎಂಬವರು ತಮ್ಮ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಿ ಅದನ್ನು ‘CM of Karnataka’ ಎಕ್ಸ್ (ಹಿಂದಿನ ಟ್ವಿಟರ್) ಖಾತೆಗೆ ಟ್ಯಾಗ್ ಮಾಡಿದ್ದರು. ಗಮನಿಸಿದ ಮುಖ್ಯಮಂತ್ರಿ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳನ್ನು ಬಾಲಕನ ಮನೆಗೆ ಕಳುಹಿಸಿ, ಆತನ ತಂದೆ ತಾಯಿಗೆ ಶಿಕ್ಷಣದ ಮಹತ್ವದ ಬಗ್ಗೆ ಅರಿವು ಮೂಡಿಸಿದ್ದಾರೆ. ಬಳಿಕ ಕೇವಲ 24 ಗಂಟೆಗಳ ಒಳಗೆ ಬಾಲಕನನ್ನು ಶಾಲೆಗೆ ಸೇರ್ಪಡೆ ಮಾಡಿಸಿ ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಈಗ ಯೋಗೇಶ್ಗೆ ಬಸಾಪುರ ಗ್ರಾಮದ ಸರಕಾರಿ ಶಾಲೆಯಲ್ಲಿ ಆರನೇ ತರಗತಿಯಲ್ಲಿ ಓದಲು ಅವಕಾಶ ಕಲ್ಪಿಸಲಾಗಿದೆ.