ಚಿಕ್ಕಮಗಳೂರು : ಅಂಗಡಿ ಮಾಲೀಕರೊಬ್ಬರಿಗೆ ಒಂದು ತಿಂಗಳಿಗೆ ಬರೋಬ್ಬರಿ 10 ಲಕ್ಷ ರೂಪಾಯಿ ವಿದ್ಯುಲ್ ಬಿಲ್ ಬಂದಿದ್ದು, ವಿದ್ಯುತ್ ಬಿಲ್ ಕಂಡು ಅಂಗಡಿ ಮಾಲೀಕರು ಬೆಚ್ಚಿಬಿದ್ದಿರುವ ಘಟನೆ ಜಿಲ್ಲೆಯ ಕಡೂರು ಪಟ್ಟಣದಲ್ಲಿ ನಡೆದಿದೆ.
ಕಡೂರು ಪಟ್ಟಣದ ಉಳುಕಿನಕಲ್ಲು ಸಮೀಪದ ಡಾಗಾ ಕಾಂಪ್ಲೆಕ್ಸ್ ನಲ್ಲಿರುವ ಮೋಹಿತ್ ಏಜೆನ್ಸಿಗೆ ಆಗಸ್ಟ್ ತಿಂಗಳಿಗೆ 10,26,054 ರೂಪಾಯಿ ವಿದ್ಯುತ್ ಬಿಲ್ ನೀಡಲಾಗಿದೆ. ಪ್ರತಿ ತಿಂಗಳು ವಿದ್ಯುತ್ ಬಿಲ್ ಅಂದಾಜು 4,000ರಿಂದ 4,500 ರೂಪಾಯಿ ಮಾತ್ರ ಬರುತ್ತಿತ್ತು. ಆದರೆ ಆಗಸ್ಟ್ ತಿಂಗಳ ಬಿಲ್ ಏಕಾಏಕಿ 10 ಲಕ್ಷ ಬಂದಿದೆ ಎಂದು ಮಾಲೀಕರು ಹೇಳಿದ್ದಾರೆ.
ಬಿಲ್ನಲ್ಲಿ 1/8/2023 ರಿಂದ 1/9/23ರ ವರೆಗಿನ ಅವಧಿಯನ್ನು ನಮೂದಿಸಲಾಗಿದೆ. ಬಿಲ್ ನಂ.259 ಆಗಿದ್ದು, 8,35,737 ರೂ. ಎಫ್‍ಪಿಪಿಎಸಿ (1.16) ಮತ್ತು ಟ್ಯಾಕ್ಸ್ 9% (75,216.33 ರೂ.ಗಳು) ಒಟ್ಟು 10,260,54 ರೂ. ಎಂದು ಬಿಲ್ನಲ್ಲಿ ನಮೂದಿಸಲಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಅಂಗಡಿ ಮಾಲೀಕ, ಈ ಹಿಂದೆ ವಿದ್ಯುತ್ ಬಿಲ್ನ್ನು ಸಮಯಕ್ಕೆ ಸರಿಯಾಗಿ ಪಾವತಿಸುತ್ತಾ ಬಂದಿದ್ದೇವೆ. ಯಾವ ತಿಂಗಳು ಕೂಡ ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡಿಲ್ಲ. ಆದರೆ, ಈ ತಿಂಗಳು 10 ಲಕ್ಷ ರೂಪಾಯಿ ಬಿಲ್ ಬಂದಿದೆ. ಈ ಸಂಬಂಧ ಕಡೂರು ಮೆಸ್ಕಾಂ ಅಧಿಕಾರಿಗಳನ್ನು ಸಂಪರ್ಕಿಸಿದ್ದೇವೆ. ಅವರು ಸರಿ ಮಾಡಿಕೊಡುತ್ತೇವೆ ಎಂದು ಹೇಳಿದ್ದಾರೆ. ನಾಲ್ಕು ದಿನ ಕಳೆದರೂ ಈವರೆಗೂ ಯಾವುದೇ ಮಾಹಿತಿ ನೀಡಿಲ್ಲ ಎಂದು ಮೆಸ್ಕಾಂ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.