ಕೊಲೊಂಬೊ (ಶ್ರೀಲಂಕಾ): ಭಾರತ-ಪಾಕಿಸ್ತಾನ ತಂಡಗಳ ನಡುವಿನ ಏಷ್ಯಾ ಕಪ್ 2023ರ ಸೂಪರ್-4 ಪಂದ್ಯ ಮಳೆಯಿಂದಾಗಿ ಭಾನುವಾರ ಅಪೂರ್ಣಗೊಂಡಿತು.
ಈ ಪಂದ್ಯ ಮೀಸಲು ದಿನವಾದ ಇಂದು ನಡೆಯಲಿದೆ. ರೋಹಿತ್ ಶರ್ಮಾ ಮತ್ತು ಶುಭ್‌ಮನ್ ಗಿಲ್ ಆಕ್ರಮಣಕಾರಿ ಅರ್ಧಶತಕದಿಂದಾಗಿ ಭಾರತ 24.1 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 147 ರನ್ ಗಳಿಸಿತ್ತು. ಇಬ್ಬರು ಆರಂಭಿಕ ಬ್ಯಾಟರ್‌ಗಳು ಔಟಾದ ನಂತರ ಮೈದಾನದಲ್ಲಿ ಮಳೆ ಅಬ್ಬರಿಸಿತು. ಅಂತಿಮವಾಗಿ ಪಂದ್ಯವನ್ನು ಮೀಸಲು ದಿನದಂದು ನಡೆಸುವ ನಿರ್ಧಾರ ತೆಗೆದುಕೊಳ್ಳಲಾಯಿತು. ಈ ಮಧ್ಯೆ, ಜಸ್ಪ್ರೀತ್ ಬುಮ್ರಾ ಮತ್ತು ಶಾಹೀನ್ ಶಾ ಆಫ್ರಿದಿ ಅವರ ವಿಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗ್ತಿದೆ.
ಇತ್ತೀಚೆಗಷ್ಟೇ ಟೀಂ ಇಂಡಿಯಾದ ಸ್ಟಾರ್ ವೇಗಿ ಜಸ್ಪ್ರೀತ್ ಬುಮ್ರಾ ತಂದೆಯಾಗಿದ್ದರು. ಪತ್ನಿ ಸಂಜನಾ ಗಣೇಶನ್ ಅವರು ಗಂಡು ಮಗುವಿಗೆ ಜನ್ಮ ನೀಡಿದ್ದರು. ಇದೇ ಕಾರಣಕ್ಕೆ ಬುಮ್ರಾ ಅವರನ್ನು ಪಾಕ್ ವೇಗಿ ಶಾಹೀನ್ ಶಾ ಆಫ್ರಿದಿ ಗಿಫ್ಟ್ ನೀಡುವ ಮೂಲಕ ಅಭಿನಂದಿಸಿದ್ದಾರೆ. ಬುಮ್ರಾ ಧನ್ಯವಾದ ತಿಳಿಸಿದರು.
“ಅಲ್ಲಾ ಉಸ್ಕೊ ಹಮೇಶಾ ಖುಷ್ ರಖೆ ಔರ್ ನಯಾ ಬುಮ್ರಾ ಬನೆ” (ಅಲ್ಲಾಹು ಅವರನ್ನು ಆಶೀರ್ವದಿಸಲಿ ಮತ್ತು ಸಂತೋಷವಾಗಿಟ್ಟಿರಲಿ. ನಾವು ಹೊಸ ಬುಮ್ರಾರನ್ನು ನೋಡಬಹುದು)” ಎಂದು ಸೋಶಿಯಲ್ ಮೀಡಿಯಾದಲ್ಲಿ ಅಫ್ರಿದಿ ಬರೆದುಕೊಂಡಿದ್ದಾರೆ. ಇದಕ್ಕೆ ಬುಮ್ರಾ, ತುಂಬಾ ಧನ್ಯವಾದಗಳು ಎಂದು ಪ್ರತಿಕ್ರಿಯಿಸಿದ್ದಾರೆ. ಈ ಸಂದರ್ಭವನ್ನು ಪಾಕಿಸ್ತಾನ ಕ್ರಿಕೆಟ್ ತಂಡದ ಅಧಿಕೃತ ವಿಡಿಯೋಗ್ರಾಫರ್ ಸೆರೆಹಿಡಿದಿದ್ದರು. ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಪೋಸ್ಟ್ ಮಾಡಿದೆ.