ಬೆಳಗಾವಿ: ಅದು ಶಿಕ್ಷಣ ವಂಚಿತ ಕುಗ್ರಾಮವಾಗಿತ್ತು.
ಆದರೆ ಆ ಸ್ವಾಮೀಜಿ ಅಂದು ತೆಗೆದುಕೊಂಡ ನಿರ್ಧಾರದಿಂದ ಈಗ ಇಡೀ ಗ್ರಾಮದ ಚಿತ್ರಣವೇ ಬದಲಾಗಿದೆ. ಶಿಕ್ಷಕರ ತವರೂರಾಗಿ ಮಾರ್ಪಟ್ಟಿದ್ದು, ರಾಜ್ಯದಲ್ಲೇ ಅತೀ ಹೆಚ್ಚು ಶಿಕ್ಷಕರನ್ನು ಹೊಂದಿರುವ ಹೆಗ್ಗಳಿಕೆಯನ್ನು ಈ ಗ್ರಾಮ ಪಡೆದುಕೊಂಡಿದೆ. ಶಿಕ್ಷಕರ ದಿನಾಚರಣೆ ನಿಮಿತ್ತ ಈ ವಿಶೇಷ ವರದಿ ನಿಮಗಾಗಿ.
ಹೌದು, ಸವದತ್ತಿ ತಾಲೂಕಿನ ಇಂಚಲ ಗ್ರಾಮದಲ್ಲಿ ಇಂಚಿಂಚಿಗೂ ಶಿಕ್ಷಕರು ಸಿಗುತ್ತಾರೆ. ರಾಜ್ಯದ ವಿವಿಧೆಡೆ ಐನೂರಕ್ಕೂ ಹೆಚ್ಚು ಶಿಕ್ಷಕರು ಅಕ್ಷರ ಕಲಿಸುವ ಮೂಲಕ ವಿದ್ಯಾರ್ಥಿಗಳ ಬಾಳಿಗೆ ಬೆಳಕಾಗಿದ್ದಾರೆ. ಅಷ್ಟಕ್ಕೂ ಇಂಚಲ ಗ್ರಾಮ ಶಿಕ್ಷಕರ ತವರೂರಾಗಲು ಇಲ್ಲಿನ ಸಿದ್ಧಸಂಸ್ಥಾನ ಮಠದ ಡಾ. ಶಿವಾನಂದ ಭಾರತಿ ಸ್ವಾಮೀಜಿ ಅವರೇ ಕಾರಣ.
1969ರಲ್ಲಿ ಅಂದಿನ ಸಿದ್ದರಾಮ ಶಿವಯೋಗಿಗಳು ಶಿವಾನಂದ ಭಾರತಿ ಸ್ವಾಮೀಜಿ ಅವರನ್ನು ತಮ್ಮ ಉತ್ತರಾಧಿಕಾರಿಯನ್ನಾಗಿ ಮಾಡಿದರು. ಪಟ್ಟಕ್ಕೆ ಏರಿದ ಮುಂದಿನ ವರ್ಷವೇ ಗ್ರಾಮದಲ್ಲಿ ವೇದಾಂತ ಪರಿಷತ್ ಆಯೋಜಿಸಿದ್ದರು. ತೀರಾ ಹಿಂದುಳಿದ ಗ್ರಾಮವನ್ನು ಸುಧಾರಣೆ ಮಾಡಬೇಕಾದರೆ ಏನು ಮಾಡಬೇಕೆಂದು ಯೋಚಿಸಿ ಇಲ್ಲಿನ ಜನರಿಗೆ ಶಿಕ್ಷಣ ನೀಡಬೇಕೆಂದು ನಿರ್ಧರಿಸಿದರು. ಅದರಂತೆ 1975ರಲ್ಲಿ ಶಿವಯೋಗೀಶ್ವರ ಪ್ರೌಢಶಾಲೆ, 1982ರಲ್ಲಿ ಪದವಿ ಪೂರ್ವ ಕಾಲೇಜು ಆರಂಭಿಸುವ ಮೂಲಕ ಶೈಕ್ಷಣಿಕ ಕ್ರಾಂತಿಗೆ ಮುನ್ನುಡಿ ಬರೆದರು.