ಹುಬ್ಬಳ್ಳಿ : ಲೋಕಸಭಾ ಚುನಾವಣೆ ಸಮೀಸುತ್ತಿರುವುದರಿಂದ ಒಂದು ದೇಶ ಒಂದು ಚುನಾವಣೆ ಮಾಡಲು ಪ್ರಧಾನಿ ನರೇಂದ್ರ ಮೋದಿ ಅವರು ಹೊರಟಿದ್ದು, ಇದರಲ್ಲಿ ಸಾಕಷ್ಟು ಅನುಮಾನಗಳಿವೆ ಎಂದು ಕಾನೂನು ಸಚಿವ ಹೆಚ್ ಕೆ ಪಾಟೀಲ್ ಹೇಳಿದರು.
ನಗರದಲ್ಲಿಂದು ಮಾತನಾಡಿದ ಅವರು, ನಾಲ್ಕು ವರ್ಷ ಸುಮ್ಮನಿದ್ದ ಕೇಂದ್ರ ಸರ್ಕಾರ ಮಾಜಿ ರಾಷ್ಟ್ರಪತಿ ರಾಮನಾಥ ಕೋವಿಂದ ನೇತೃತ್ವದಲ್ಲಿ ಸಮಿತಿ ಮಾಡಿದ್ದು, ಅವರು ರಾಜಕೀಯ ವಾಸನೆ ಇದ್ದವರಾಗಿದ್ದಾರೆ. ಕೇಂದ್ರ ಸರ್ಕಾರ ಲೋಕಸಭಾ ಅವಧಿ ವಿಸ್ತಾರ ಮಾಡಿ ಚುನಾವಣೆ ಮುಂದೂಡುವ ದುರುದ್ದೇಶವಿದೆ. ಮೋದಿ ಅವರು ಸಂವಿಧಾನ ಬದಲಿಸಿ ಲೋಕಸಭಾ ಚುನಾವಣೆ ಮುಂದೂಡಿದರೆ ಜನರು ಸುಮ್ಮನಿರಲ್ಲ. ಸಮಿತಿಯಲ್ಲಿ ಸುಪ್ರೀಂ ಕೋರ್ಟ್ ನ್ಯಾಯಾಧೀಶರು ಇರಬೇಕಿತ್ತು. ಪಕ್ಷಾತೀತವಿರುವ ಎಷ್ಟೊಂದು ಜನರಿದ್ದಾರೆ. ಅಂತವರ ನೇಮಕ ಮಾಡಿಕೊಳ್ಳಬೇಕಿತ್ತು. ಕೇಂದ್ರ ಸರ್ಕಾರದ ಹೆಜ್ಜೆಯಲ್ಲಿ ಸಾಕಷ್ಟು ಅನುಮಾನಗಳಿವೆ ಎಂದು ಹೇಳಿದರು.
ಕರ್ನಾಟಕ ಚುನಾವಣೆ ಬಳಿಕ ಬಿಜೆಪಿ ವಿಶ್ವಾಸ ಕಳೆದುಕೊಂಡಿದೆ. ರಾಜ್ಯದಲ್ಲಿ ಅವರ ಪರಿಸ್ಥಿತಿ ಹದಗೆಡುತ್ತಿದೆ. ಐದು ಗ್ಯಾರಂಟಿ ಯಶಸ್ಸು ನೋಡಿ ಕೇಂದ್ರ ಸರ್ಕಾರ ಭಯದಿಂದ ಬೆಲೆ ಇಳಿಕೆ ಮಾಡುತ್ತಿದೆ ಎಂದರು. ಕಾವೇರಿ ವಿಷಯದಲ್ಲಿ ರಾಜಕೀಯ ಮಾಡುತ್ತಿದೆ ಎಂದು ಮಾಜಿ ಪ್ರಧಾನಿ ದೇವೆಗೌಡರ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವರು, ಕರ್ನಾಟಕ ಹಿತ ರಕ್ಷಣೆಗೆ ಕಾನೂನು ಹೋರಾಟ ಮಾಡಿದ್ದೇವೆ. ಸರ್ವಪಕ್ಷ ಸಭೆ ಕರೆದು ಮಾರ್ಗದರ್ಶನ ಪಡೆದಿದ್ದೇವೆ. ಇದರಲ್ಲಿ ಯಾವುದೇ ರಾಜಕಾಣ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.