ರಾಯಚೂರು : ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿದ್ದ ಕೈದಿ ಕಾರಾಗೃಹದಿಂದ ಪರಾರಿಯಾಗಿರುವ ಘಟನೆ ಜಿಲ್ಲೆಯ ದೇವದುರ್ಗದ ಉಪಕಾರಾಗೃಹದಲ್ಲಿ ನಡೆದಿದೆ. ವಿಚಾರಣಾಧೀನ ಕೈದಿ ಅನ್ವರಬಾಷಾ ಪರಾರಿಯಾಗಿರುವ ಕೈದಿ.
ವಿಜಯನಗರ ಜಿಲ್ಲೆಯ ರಾಮನಗರ ನಿವಾಸಿಯಾಗಿದ್ದ ಅನ್ವರಬಾಷಾ ಪೇಂಟಿಂಗ್ ಕೆಲಸ ಮಾಡುತ್ತಿದ್ದ. ಕಳೆದ ಮೇ ತಿಂಗಳಲ್ಲಿ ದೇವದುರ್ಗ ತಾಲೂಕಿನ ಗಬ್ಬೂರು ಪೊಲೀಸ್ ಠಾಣೆ ವ್ಯಾಪ್ತಿಯ ಮಾಶಾಳ ಹತ್ತಿರ ನಡೆದ ಕೊಲೆ ಪ್ರಕರಣ ಸಂಬಂಧ ಅನ್ವರಬಾಷಾನನ್ನು ಬಂಧಿಸಿ ಜೈಲಿನಲ್ಲಿರಿಸಲಾಗಿತ್ತು. ಕಳೆದ ಮೂರು ತಿಂಗಳಿನಿಂದ ಜೈಲಿನಲ್ಲಿದ್ದ ಆರೋಪಿ, ಇಂದು ಬೆಳಗ್ಗೆ ಜೈಲಿನ ಕಾಂಪೌಂಡ್ ಹಾರಿ ಪರಾರಿಯಾಗಿದ್ದಾನೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ದೇವದುರ್ಗ ಠಾಣೆ ಪೊಲೀಸರು ಪ್ರತಿಕ್ರಿಯಿಸಿ, ವಿಚಾರಾಧೀನ ಕೈದಿಯೋರ್ವ ಪರಾರಿಯಾಗಿದ್ದಾನೆ. ಈ ಸಂಬಂಧ ಜೈಲರ್ ದೂರು ದಾಖಲಿಸಿದ್ದು, ಆರೋಪಿ ಪತ್ತೆಗೆ ಕಾರ್ಯಾಚರಣೆ ನಡೆಸಲಾಗುತ್ತಿದೆ. ದೇವದುರ್ಗ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ ಎಂದಿದ್ದಾರೆ.
Laxmi News 24×7