ಹುಬ್ಬಳ್ಳಿ,ನ.3- ವಿಜಯಪುರ ಭೀಮಾ ತೀರದಲ್ಲಿನ ಅಪರಾಧ ಕೃತ್ಯಗಳಿಗೆ ತಾತ್ವಿಕ ಅಂತ್ಯ ಹಾಡುವುದಾಗಿ ಉತ್ತರ ವಲಯ ಐಜಿಪಿ ರಾಘವೇಂದ್ರ ಸುವಾಸ್ ಹೇಳಿದ್ದಾರೆ. ಭೀಮಾ ತೀರದ ಮಹಾದೇವ ಸಾಹುಕಾರ ಭೈರಗೊಂಡ ಮೇಲೆ ನಡೆದ ಗುಂಡಿನ ದಾಳಿಗೆ ಸಂಬಂಧಿಸಿದಂತೆ ಘಟನೆ ನಡೆದ ರಾಷ್ಟ್ರೀಯ ಹೆದ್ದಾರಿ ಕನ್ನಾಳ ಕ್ರಾಸ್ ಬಳಿ ಸ್ಥಳ ಪರಿಶೀಲನೆ ನಡೆಸಿದ ನಂತರ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು.
ಮಹಾದೇವ ಸಾಹುಕಾರ ಭೈರಗೊಂಡ ಹತ್ಯೆಗೆ ಸಂಚು ರೂಪಿಸಿ 15-20 ಯುವಕರು ದಾಳಿ ನಡೆಸಿದ್ದಾರೆ. ವಾಹನ ಹಾಯಿಸಿ ಭೈರಗೊಂಡ ಇದ್ದ ಕಾರು ನಿಲ್ಲಿಸಿ ಗುಂಡಿನ ದಾಳಿ ನಡೆಸಿದ್ದಾರೆ. ನಂತರ ಪೆಟ್ರೋಲ್ ಬಾಂಬ್ ಸಹ ಎಸೆಯಲಾಗಿದೆ. ಆದರೆ ಅದು ಸ್ಫೋಟಗೊಂಡಿಲ್ಲ. ಸದ್ಯ ಈ ಘಟನೆಯಲ್ಲಿ ಕಾರು ಚಾಲಕ ಮತ್ತು ಭೈರಗೊಂಡ ಅಂಗರಕ್ಷಕ ಸಾವನ್ನಪ್ಪಿದ್ದಾರೆ.
ವಿಜಯಪುರ ಮತ್ತು ಸೋಲಾಪುರದ ರೌಡಿಗಳ ಪತ್ತೆಗೆ ತಯಾರಿ ನಡೆಸಲಾಗಿದೆ. ಇದೊಂದು ವ್ಯವಸ್ಥಿತ ಸಂಚಾಗಿದ್ದು, ವೃತ್ತಿಪರ ಕೊಲೆಗಾರರು ಈ ಕೃತ್ಯದಲ್ಲಿ ಭಾಗಿಯಾಗಿದ್ದಾರೆ. ಈ ಸಂಬಂಧ ತನಿಖೆ ಆರಂಭಿಸ ಲಾಗಿದ್ದು, ಮಹಾದೇವ ಸಾಹುಕಾರ ಭೈರಗೊಂಡ ಹತ್ಯೆ ಯತ್ನದ ಹಿಂದೆ ಯಾರಿದ್ದಾರೆ ಎನ್ನುವುದು ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ. ಇದು ಸುಪಾರಿ ಹತ್ಯೆಗೆ ಯತ್ನವೋ ಅಥವಾ ಬೇರೆ ಉದ್ದೇಶವೋ ಎನ್ನುವುದು ಶೀಘ್ರ ಬಹಿರಂಗವಾಗಲಿದೆ ಎಂದು ಐಜಿಪಿ ತಿಳಿಸಿದರು.