ಕೊಪ್ಪಳ: ರಾಜ್ಯದಲ್ಲಿ ಕೊರೊನಾ ಸಾವಿನ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಈ ಕೊರೊನಾದಿಂದ ಸಾವು ಮಾತ್ರ ಬರೋದು ಬೇಡ. ಬೇರೆ ಯಾವುದೇ ರೀತಿಯಾದರೂ ಸಾವು ಬರಲಿ ಅನ್ನೋ ಸ್ಥಿತಿ ನಿರ್ಮಾಣವಾಗಿದೆ. ಕೊಪ್ಪಳದಲ್ಲಿ ಒಂದೇ ದಿನ ಕೊರೊನಾ ಮಹಾಮಾರಿಗೆ ಇಬ್ಬರು ಬಲಿಯಾಗಿದ್ದಾರೆ.
ಗಂಗಾವತಿ ತಾಲೂಕಿನ ಹಿರೇಜಂತಕಲ್ ಗ್ರಾಮದ ನಿವಾಸಿ 51 ವರ್ಷದ ವ್ಯಕ್ತಿ ಮತ್ತು ಕೊಪ್ಪಳ ತಾಲೂಕಿನ ಮುನಿರಾಬಾದನ 65 ವರ್ಷದ ವ್ಯಕ್ತಿ ಕೊರೊನಾದಿಂದ ಮೃತಪಟ್ಟಿದ್ದರು. 51 ವರ್ಷದ ವ್ಯಕ್ತಿಯ ಅಂತ್ಯಸಂಸ್ಕಾರವನ್ನು ಹಿರೇಜಂತಕಲ್‍ನ ಸ್ಮಶಾನದಲ್ಲಿ ಮಾಡಲು ತಾಲೂಕಾಡಳಿತ ಸಿದ್ಧತೆ ಮಾಡಿಕೊಂಡಿತ್ತು. ಆದರೆ ಗ್ರಾಮಸ್ಥರು ಅಂತ್ಯಸಂಸ್ಕಾರಕ್ಕೆ ವಿರೋಧ ವ್ಯಕ್ತಪಡಿಸಿದರು.
ನಂತರ ತಾಲೂಕಾಧಿಕಾರಿಗಳು ಶವದೊಂದಿಗೆ ಗಂಗಾವತಿ ತಾಲೂಕಿನ ಸಂಗಾಪುರ ಗ್ರಾಮದ ಸ್ಮಶಾನದಲ್ಲಿ ಗುರುವಾರ ರಾತ್ರಿ ಅಂತ್ಯಸಂಸ್ಕಾರಕ್ಕೆ ಆಗಮಿಸಿದರು. ಅಲ್ಲಿಯೂ ಕೂಡ ಗ್ರಾಮಸ್ಥರು ವಿರೋಧಿಸಿದ್ದಾರೆ. ಮೃತ ಸೋಂಕಿತನನ್ನು ಗ್ರಾಮದಲ್ಲಿ ಅಂತ್ಯಸಂಸ್ಕಾರ ಮಾಡದಂತೆ ಎರಡು ಗ್ರಾಮದವರು ಭಾರೀ ವಿರೋಧಿಸಿದರು.
ಇನ್ನೂ ಗ್ರಾಮಸ್ಥರಿಗೆ ಮಾನವರಿಕೆ ಮಾಡಲು ತಾಲೂಕಾಡಳಿತ ಮತ್ತು ಪೊಲೀಸ್ ಇಲಾಖೆಯ ಅಧಿಕಾರಿಗಳು ಹರಸಾಹಸ ಪಟ್ಟಿದ್ದಾರೆ. ಆದರು ಜನರು ಮಾತ್ರ ಅಂತ್ಯಸಂಸ್ಕಾರಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಸಂಗಾಪೂರದಲ್ಲಿ ಗ್ರಾಮಸ್ಥರು ಗುಂಡಿ ತೋಡುತ್ತಿದ್ದ ಜೆಸಿಬಿ ಚಾಲಕನ ಮೇಲೆ ಹಲ್ಲೆ ಮಾಡಿದ್ದಲ್ಲದೇ ಜಿಸಿಬಿ ಮೇಲೆ ಕಲ್ಲು ತೂರಾಟ ಮಾಡಿದ್ದರು. ಕೊನೆಗೆ ಸತತ 6 ಗಂಟೆಗಳ ಫಜೀತಿಯ ನಡುವೆ ತಾಲೂಕಾಡಳಿತ ಗುಡ್ಡದಲ್ಲಿ ಮಧ್ಯರಾತ್ರಿ 1ಕ್ಕೆ ಅಂತ್ಯಸಂಸ್ಕಾರ ಮಾಡಬೇಕಾಯ್ತು.