ಬೆಳಗಾವಿ : ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ನೇಮಕಗೊಂಡ ಮಹಾರಾಷ್ಟ್ರ ಮೂಲದ ಪೌರ ಕಾರ್ಮಿಕರನ್ನು ತಕ್ಷಣ ವಜಾಗೊಳಿಸಬೇಕೆಂದು ಒತ್ತಾಯಿಸಿ ಇಂದು ಕರ್ನಾಟಕ ನವ ನಿರ್ಮಾಣ ಸೇನೆಯ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಪಾಲಿಕೆ ಆಯುಕ್ತರಿಗೆ ಮನವಿ ಸಲ್ಲಿಸಿದರು.
ಬೆಳಗಾವಿ ಪಾಲಿಕೆಯ ವ್ಯಾಪ್ತಿಯಲ್ಲಿ ಸಾಕಷ್ಟು ಪೌರ ಕಾರ್ಮಿಕರು ಇದ್ದಾರೆ. ಕೆಲ ಬಿಜೆಪಿ ಸದಸ್ಯರ ಕುಮ್ಮಕ್ಕಿನಿಂದ ಮಹಾರಾಷ್ಟ್ರ ಮೂಲದ ಪೌರಕಾರ್ಮಿಕರ ನೇಮಕ ಮಾಡಿಕೊಂಡಿರುವ ಕ್ರಮ ಸರಿಯಲ್ಲ ಎಂದು ಪ್ರತಿಭಟನಾಕಾರರು ಕಿಡಿಕಾರಿದರು.
”ಪಾಲಿಕೆಯಲ್ಲಿ ಮಹಾರಾಷ್ಟ್ರದ ಕೋವಾಡದ ಪೌರ ಕಾರ್ಮಿಕರನ್ನು ನೇಮಕ ಮಾಡಲಾಗಿದೆ. ಅವರನ್ನು ಇಲ್ಲಿಗೆ ತಂದು ಸೇರಿಸಿದವರು ಯಾರು ಹಾಗೂ ಮಹಾರಾಷ್ಟ್ರ ಮೂಲದ ಪೌರ ಕಾರ್ಮಿಕರು ಎಷ್ಟು ಜನ ಇದ್ದಾರೋ ಅವರನ್ನು ಕೂಡಲೇ ವಜಾ ಮಾಡಿ ಸ್ಥಳೀಯರನ್ನು ನೇಮಕ ಮಾಡಿಕೊಳ್ಳಬೇಕು. ಪಾಲಿಕೆಯಲ್ಲಿ ಸದಸ್ಯರ ಸಂಬಂಧಿಕರೇ ಮೇಲ್ವಿಚಾರಕರಾಗಿದ್ದಾರೆ. ಅವರ ಅರ್ಹತೆ ಮತ್ತು ಯಾವ ಆಧಾರದ ಮೇಲೆ ಅವರನ್ನು ನೇಮಕ ಮಾಡಲಾಗಿದೆ. ಇದರ ಸಮಗ್ರ ತನಿಖೆ ನಡೆಸಿ ಪಾಲಿಕೆಯಲ್ಲಿ ಕನ್ನಡಿಗರಿಗೆ ಮೊದಲ ಆದ್ಯತೆ ನೀಡಬೇಕು. ಇಲ್ಲದಿದ್ದರೆ ಮುಂಬರುವ ದಿನಗಳಲ್ಲಿ ಉಗ್ರ ಹೋರಾಟ ಮಾಡಬೇಕಾಗುತ್ತದೆ” ಎಂದು ಕರ್ನಾಟಕ ನವ ನಿರ್ಮಾಣ ಸೇನೆ ಜಿಲ್ಲಾಧ್ಯಕ್ಷ ಬಾಬ ಸಂಗೋಡಿ ಎಚ್ಚರಿಕೆ ನೀಡಿದರು.
ಮನವಿ ಸ್ವೀಕರಿಸಿ ಮಾತನಾಡಿದ ಪಾಲಿಕೆ ಆಯುಕ್ತ ಅಶೋಕ ದುಡಗುಂಟಿ, “ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಮಹಾರಾಷ್ಟ್ರ ಮೂಲದವರು ಗುತ್ತಿಗೆಯಾಧಾರದ ಮೇಲೆ ನೇಮಕವಾದ ಪೌರಕಾರ್ಮಿಕರ ಬಗ್ಗೆ ತನಿಖೆ ನಡೆಸಿ ಮೂರು ದಿನಗಳಲ್ಲಿ ವರದಿ ನೀಡುವಂತೆ ಸೂಚಿಸಿದ್ದೇನೆ. ವರದಿ ಬಂದ ಬಳಿಕ ಮುಲಾಜಿಲ್ಲದೆ ಕ್ರಮ ಕೈಗೊಳ್ಳುತ್ತೇವೆ” ಎಂದು ಭರವಸೆ ನೀಡಿದರು.