ಬೆಂಗಳೂರು: ಚಂದ್ರನ ದಕ್ಷಿಣ ಧ್ರುವದ ಮೇಲೆ ಯಶಸ್ವಿಯಾಗಿ ಇಳಿದಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಇದೀಗ ಸೂರ್ಯನ ಅಧ್ಯಯನಕ್ಕೆ ಮುಂದಾಗಿದೆ.
ಆದಿತ್ಯ ಎಲ್-1 ವೀಕ್ಷಣಾಲಯ ಹೊತ್ತ ರಾಕೆಟ್ ಅನ್ನು ಸೆಪ್ಟೆಂಬರ್ 2ರಂದು ಬೆಳಗ್ಗೆ 11:50 ನಿಮಿಷಕ್ಕೆ ಆಂಧ್ರಪ್ರದೇಶದ ಶ್ರೀಹರಿಕೋಟಾದಿಂದ ಉಡಾವಣೆ ಮಾಡಲಾಗುವುದು ಎಂದು ಇಸ್ರೋ ಇಂದು (ಸೋಮವಾರ) ಘೋಷಿಸಿದೆ.
ಸೂರ್ಯನ ಅಧ್ಯಯನ ಮಾಡುವ ಭಾರತದ ಮೊಟ್ಟ ಮೊದಲ ಬಾಹ್ಯಾಕಾಶ ವೀಕ್ಷಣಾಲಯ ಇದಾಗಿದೆ. ಈ ಮಿಷನ್ ಭೂಮಿಯಿಂದ 1.5 ಮಿಲಿಯನ್ ಕಿಲೋಮೀಟರ್ ದೂರ ಕ್ರಮಿಸಲಿದೆ. ಚಂದ್ರನಿಗಿಂತ ನಾಲ್ಕು ಪಟ್ಟು ದೂರದ ಪ್ರಯಾಣ ಇದಾಗಿದೆ.
ಮಿಷನ್ ಉಡಾವಣೆಯ ಬಗ್ಗೆ ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ (ಹಿಂದಿನ ಟ್ವಿಟರ್) ಅಧಿಕೃತ ಮಾಹಿತಿ ಹಂಚಿಕೊಂಡಿರುವ ಇಸ್ರೋ, ಸೂರ್ಯನ ಮೊದಲ ಅಧ್ಯಯನಕ್ಕೆ ಸಿದ್ಧವಾಗಿರುವ ಆದಿತ್ಯ ಎಲ್-1 ಉಪಗ್ರಹ ಸೆಪ್ಟೆಂಬರ್ 2 ರಂದು ಬೆಳಗ್ಗೆ 11:50 ಕ್ಕೆ ಉಡಾವಣೆ ಕಾಣಲಿದೆ. ಇದರ ವೀಕ್ಷಣೆಗೆ ನಾಗರಿಕರಿಗೆ ಅವಕಾಶ ಮಾಡಕೊಡಲಾಗುವುದು ಎಂದು ವೆಬ್ಲಿಂಕ್ ಒಂದನ್ನು ನೀಡಿದ್ದು, ಅದರಲ್ಲಿ ನೋಂದಾಯಿಸಿಕೊಳ್ಳಬಹುದು. ಶ್ರೀಹರಿಕೋಟಾದ ಲಾಂಚ್ ವ್ಯೂ ಗ್ಯಾಲರಿಯಿಂದ ಉಡಾವಣೆಯನ್ನು ಆಸಕ್ತರು ವೀಕ್ಷಿಸಬಹುದು.
ಆದಿತ್ಯ-L1 ಉಪಗ್ರಹವನ್ನು PSLV ಎಕ್ಸ್ಎಲ್ ವಾಹಕ ಮೂಲಕ ಉಡಾವಣೆ ಮಾಡಲಾಗುವುದು. ಆರಂಭದಲ್ಲಿ ಬಾಹ್ಯಾಕಾಶ ನೌಕೆಯನ್ನು ಭೂಮಿಯ ಕಡಿಮೆ ಕಕ್ಷೆಯಲ್ಲಿ ಇರಿಸಲಾಗುತ್ತದೆ. ತರುವಾಯ, ಕಕ್ಷೆಯ ವಿಸ್ತರಣೆ ಕಾರ್ಯ ನಡೆಯಲಿದೆ. ನಂತರ ಬಾಹ್ಯಾಕಾಶ ನೌಕೆಯನ್ನು ಆನ್‌ಬೋರ್ಡ್ ಪ್ರೊಪಲ್ಷನ್ ಬಳಸಿ ಲ್ಯಾಗ್ರೇಂಜ್ ಪಾಯಿಂಟ್ (L1) ಕಡೆಗೆ ಉಡಾವಣೆ ಮಾಡಲಾಗುತ್ತದೆ ಎಂದು ಇಸ್ರೋ ತಿಳಿಸಿದೆ.
ಬಾಹ್ಯಾಕಾಶ ನೌಕೆಯು L1 ಪಾಯಿಂಟ್ ಕಡೆಗೆ ಚಲಿಸುವಾಗ ಅದು ಭೂಮಿಯ ಗುರುತ್ವಾಕರ್ಷಣೆಯ ಪ್ರಭಾವದ ಗೋಳದಿಂದ (ಎಸ್ಒಐ) ಕಳಚಿಕೊಳ್ಳುತ್ತದೆ. ಅಲ್ಲಿಂದ ನೌಕೆಯ ಪ್ರಯಾಣ ಆರಂಭವಾಗುತ್ತದೆ. ಬಳಿಕ ಬಾಹ್ಯಾಕಾಶ ನೌಕೆಯನ್ನು L1 ಪಾಯಿಂಟ್ ಸುತ್ತ ದೊಡ್ಡ ಹಾಲೋ ಕಕ್ಷೆಯ ಮೇಲೆ ತರಲಾಗುತ್ತದೆ. ಇದು ದೀರ್ಘ ಅವಧಿಯ ಪ್ರಯಾಣವಾಗಿದ್ದು, ಉಡಾವಣೆಯಿಂದ ಹಿಡಿದು L1 ಪಾಯಿಂಟ್ವರೆಗೆ ಸಾಗಲು ಸುಮಾರು ನಾಲ್ಕು ತಿಂಗಳು ಹಿಡಿಯುತ್ತದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.
ಆದಿತ್ಯ ಎಲ್-1 ಉದ್ದೇಶಗಳೇನು?
- ಸೂರ್ಯನ ಕರೋನ ತಾಪ ಮತ್ತು ಸೌರ ಮಾರುತದ ವೇಗವರ್ಧನೆ ಅಧ್ಯಯನ
- ಸೌರದ ಅಟ್ಮೋಸ್ಪಿಯರ್ ಡೈನಾಮಿಕ್ಸ್ ಅಧ್ಯಯನ
- ಸೌರ ಕಿರಣಗಳ ಆಗಮನ ಮತ್ತು ಅನಿಸೊಟ್ರೋಪಿ ತಾಪಮಾನ
- ಕರೋನಲ್ ಮಾಸ್ ಎಜೆಕ್ಷನ್ (ಸಿಎಂಇ), ಜ್ವಾಲೆಗಳು ಮತ್ತು ಭೂಮಿಯ ಸಮೀಪ ಸ್ಪೇಸ್ನ ಹವಾಮಾನ ಎಷ್ಟಿದೆ ಎಂಬುದರ ಅಧ್ಯಯನ
ಇಸ್ರೋ ನಡೆಸುತ್ತಿರುವ ಮೊದಲ ಸೂರ್ಯನ ಅಧ್ಯಯನ ಉಪಗ್ರಹ ಇದಾಗಿದ್ದು, ಆದಿತ್ಯ ಎಲ್-1 ವೀಕ್ಷಣಾಲಯದಿಂದ ಹಗಲು, ರಾತ್ರಿ, ಗ್ರಹಣಗಳ ಸಮಯದಲ್ಲೂ ಇದು ತನ್ನ ಕಾರ್ಯಾಚರಣೆ ಮುಂದುವರಿಸುತ್ತದೆ. ಸೌರ ಚಟುವಟಿಕೆ, ಎಲ್ಲ ಸಮಯದಲ್ಲಿ ಬಾಹ್ಯಾಕಾಶದಲ್ಲಿ ಹವಾಮಾನ ಬದಲಾವಣೆ ಬಗ್ಗೆಯೂ ಪ್ರಯೋಗ ನಡೆಸುತ್ತದೆ.
ಬಾಹ್ಯಾಕಾಶ ನೌಕೆಯು ವಿದ್ಯುತ್ಕಾಂತೀಯ, ಕಣ ಮತ್ತು ಕಾಂತೀಯ ಶೋಧಕಗಳನ್ನು ಬಳಸಿಕೊಂಡು ದ್ಯುತಿಗೋಳ, ವರ್ಣಗೋಳ ಮತ್ತು ಸೂರ್ಯನ ಹೊರಗಿನ ಪದರ (ಕರೋನಾ) ಅಧ್ಯಯನಕ್ಕೆ ಏಳು ಪೇಲೋಡ್‌ಗಳನ್ನು ಹೊಂದಿದೆ. ಎಲ್-1 ಪಾಯಿಂಟ್ನಲ್ಲಿದ್ದುಕೊಂಡು ನಾಲ್ಕು ಪೇಲೋಡ್‌ಗಳು ಸೂರ್ಯನಿಗೆ ನೇರವಾಗಿ ಇದ್ದು ಅಧ್ಯಯನ ನಡೆಸಿದರೆ, ಉಳಿದ ಮೂರು ಪೇಲೋಡ್‌ಗಳು ಬಾಹ್ಯಾಕಾಶದಲ್ಲಿನ ಹವಾಮಾನ ಬದಲಾವಣೆ, ಅಂತರಗ್ರಹದಲ್ಲಿ ಸೌರ ಡೈನಾಮಿಕ್ಸ್‌ನ ಪ್ರಸರಣದ ಮೇಲೆ ಅಧ್ಯಯನ ನಡೆಸುತ್ತವೆ.