ವೈದ್ಯಕೀಯ ತುರ್ತು ಪರಿಸ್ಥಿತಿಯಿಂದಾಗಿ ಬೆಂಗಳೂರು ನವದೆಹಲಿ ವಿಮಾನವನ್ನು ಭಾನುವಾರ ತಡರಾತ್ರಿ ನಾಗಪುರ ವಿಮಾನ ನಿಲ್ದಾಣದಲ್ಲಿ ಎಮರ್ಜೆನ್ಸಿ ಲ್ಯಾಂಡಿಂಗ್ ಮಾಡಲಾಗಿದೆ ಎಂದು ವಿಮಾನ ನಿಲ್ದಾಣದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ನಾಗಪುರ, ಮಹಾರಾಷ್ಟ್ರ: ವೈದ್ಯಕೀಯ ತುರ್ತು ಪರಿಸ್ಥಿತಿಯಿಂದಾಗಿ ಬೆಂಗಳೂರಿನಿಂದ ನವದೆಹಲಿಗೆ ತೆರಳಬೇಕಿದ್ದ ವಿಸ್ತಾರಾ ವಿಮಾನವನ್ನು ನಾಗಪುರನಲ್ಲಿ ಎಮೆರ್ಜೆನ್ಸಿ ಲ್ಯಾಂಡಿಂಗ್ ಮಾಡಲಾಗಿತ್ತು.
ವಿಮಾನದಲ್ಲಿ 14 ತಿಂಗಳ ಮಗುವಿನ ಹೃದಯ ಸಮಸ್ಯೆ ಇದ್ದು, ಆಕೆಯ ಆರೋಗ್ಯ ಹಠಾತ್ ಹದಗೆಟ್ಟ ಕಾರಣ ವಿಮಾನದಲ್ಲಿದ್ದ ವೈದ್ಯರು ತಕ್ಷಣವೇ ಮಗುವನ್ನು ಆಸ್ಪತ್ರೆಗೆ ಕರೆದೊಯ್ಯುಬೇಕಾಗಿದೆ ಎಂದು ಸೂಚಿಸಿದರು. ಹೀಗಾಗಿ ವಿಮಾನಯಾನದ ಮಾರ್ಗವನ್ನು ಬದಲಾಯಿಸಿದ ಪೈಲಟ್ಗಳು ನಾಗ್ಪುರ್ನಲ್ಲಿ ತುರ್ತು ಭೂಸ್ಪರ್ಶ ಮಾಡಿದರು.
ದೇವರಾದ ಸಹ ಪ್ರಯಾಣಿಕರು: ಮಗುವಿನ ಸ್ಥಿತಿ ಹದಗೆಟ್ಟು ಉಸಿರಾಟ ಸ್ಥಗಿತಗೊಂಡಿದ್ದು, ವಿಮಾನದಲ್ಲಿ ಗೊಂದಲದ ವಾತಾವರಣ ಉಂಟಾಯಿತು. ಕೂಡಲೇ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ವೈದ್ಯರ ಜೊತೆ ಸಹ ಪ್ರಯಾಣಿಕರು ಕೈ ಜೋಡಿಸಿದರು. ಅವರು ತಕ್ಷಣ ಮಗುವಿಗೆ ಸಿಪಿಆರ್ ನೀಡಿದರು ಮತ್ತು ಸಾಧ್ಯವಾದಷ್ಟು ಎಲ್ಲ ವೈದ್ಯಕೀಯ ವ್ಯವಸ್ಥೆಗಳನ್ನು ಮಾಡಿದರು. ಸಿಪಿಆರ್ ಬಳಿಕ ಮಗು ಉಸಿರಾಡತೊಡಗಿದೆ. ಬಳಿಕ ಲಭ್ಯವಿರುವ ಸಂಪನ್ಮೂಲಗಳ ಸಹಾಯದಿಂದ ಎಲ್ಲರೂ 45 ನಿಮಿಷಗಳ ಕಾಲ ಹೆಣ್ಣು ಮಗುವಿಗೆ ಚಿಕಿತ್ಸೆ ನೀಡಲಾಯಿತು.