ಬೆಂಗಳೂರು: ಇಸ್ರೋದ ಮಹೋನ್ನತ ಸಾಧನೆಗೆ ಇಡೀ ವಿಶ್ವವೇ ಅಭಿನಂದಿಸಿ ಕೊಂಡಾಡುತ್ತಿದೆ. ಇದೀಗ ಸಿಎಂ ಸಿದ್ದರಾಮಯ್ಯ ಪೀಣ್ಯದಲ್ಲಿರುವ ಇಸ್ರೋ ಕೇಂದ್ರಕ್ಕೆ ಭೇಟಿ ನೀಡಿದರು. ಚಂದ್ರಯಾನ-3 ಯಶಸ್ಸಿಗೆ ಕಾರಣರಾದ ಇಸ್ರೋ ಅಧ್ಯಕ್ಷ ಸೋಮನಾಥ ಸೇರಿದಂತೆ ಅಲ್ಲಿಯ ವಿಜ್ಞಾನಿಗಳು, ಸಿಬ್ಬಂದಿ ವರ್ಗದವರನ್ನು ಸನ್ಮಾನಿಸಿ ಗೌರವಿಸಿದರು. ಇಸ್ರೋ ಅಧ್ಯಕ್ಷರಿಗೆ ಸಿಎಂ ಸಿದ್ದರಾಮಯ್ಯ ಮೈಸೂರು ಪೇಟಾ ತೊಡಿಸಿ ಅಭಿನಂದನೆ ಸಲ್ಲಿಸಿದರು. ಜತೆಗೆ ಸಿಹಿ ಹಂಚಿ ಸಂಭ್ರಮಿಸಿದರು.
ಬಳಿಕ ಇಸ್ರೋ ಸಾಧನೆ ಕುರಿತು ಸಿಎಂ ಸಿದ್ದರಾಮಯ್ಯ ಸಂತಸ ವ್ಯಕ್ತಪಡಿಸಿದರು. ‘ವಿಕ್ರಮ್ ಲ್ಯಾಂಡರ್ ಚಂದ್ರನ ಅಂಗಳಕ್ಕೆ ಕಾಲಿಡುವ ಮೂಲಕ ಇತಿಹಾಸ ನಿರ್ಮಾಣವಾಗಿದೆ. ಚಂದ್ರಯಾನ-3 ಯಶಸ್ವಿ ನಮಗೆಲ್ಲಾ ಹೆಮ್ಮೆ ತರುವಂತಹ ವಿಚಾರ. ನಾನು ಕೂಡ ವಿಕ್ರಮ್ ರೋವರ್ ಲ್ಯಾಂಡಿಂಗ್ ವೀಕ್ಷಣೆ ಮಾಡಿದ್ದೇನೆ. ಬಹಳ ಖುಷಿ ಆಯಿತು, ಜೊತೆಗೆ ಹೆಮ್ಮೆ ಅನ್ನಿಸುತ್ತಿದೆ. ಇದೊಂದು ದೊಡ್ಡ ಸಾಧನೆ, ಹಲವು ವರ್ಷಗಳಿಂದ ವಿಜ್ಞಾನಿಗಳು ಶ್ರಮ ಪಡುತ್ತಿದ್ದಾರೆ’ ಎಂದರು.
ಸಿದ್ದರಾಮಯ್ಯ ಇಸ್ರೋಕ್ಕೆ ಭೇಟಿ ನೀಡಿ ಅಭಿನಂದಿಸಿದ ಕ್ಷಣ
‘ಅಂದಾಜು 500 ವಿಜ್ಞಾನಿಗಳ ಪರಿಶ್ರಮದ ಫಲ ಚಂದ್ರಯಾನ-3 ಯಶಸ್ಸು. ನಮ್ಮ ನೌಕೆ 3,84,000 ಸಾವಿರ ಕಿಮೀ ದೂರ ಕ್ರಮಿಸಿ ವಿಕ್ರಮ ಮೆರೆದಿದೆ. ವೈಯಕ್ತಿಕವಾಗಿ ನನಗೆ ಬಹಳ ಸಂತೋಷ ತಂದಿದೆ. ಚಂದ್ರಯಾನ-3 ಸಾಧನೆ ಐತಿಹಾಸಿಕವಾಗಿದ್ದು, ಈ ಸಾಧನೆಯಿಂದ ಇಡೀ ಜಗತ್ತು ಭಾರತದ ಕಡೆ ನೋಡುವಂತಾಗಿದೆ. ರಷ್ಯಾ, ಅಮೆರಿಕ, ಚೀನಾ, ಮಾತ್ರ ಚಂದ್ರನ ಅಂಗಳ ತಲುಪಿದ್ದವು. ಈಗ ಭಾರತ ಯಶಸ್ವಿಯಾಗಿ ಚಂದ್ರನ ದಕ್ಷಿಣ ಧ್ರುವ ತಲುಪಿದೆ. ನಾವೆಲ್ಲರೂ ಇಸ್ರೋದ ಈ ಸಾಧನೆಯಿಂದ ಖುಷಿ ಪಡಬೇಕಿದೆ ಎಂದರು