Breaking News

ಕಾಂಗ್ರೆಸ್ ಆಹ್ವಾನ ನಿಜವೆಂದು ಸೋಮಶೇಖರ್ ಒಪ್ಪಿಕೊಂಡಿದ್ದಾರೆ, ಪಕ್ಷ ಬಿಡಲ್ಲ ಅಂತಲೂ ಸ್ಪಷ್ಟಪಡಿಸಿದ್ದಾರೆ: ಆರ್​ ಅಶೋಕ್

Spread the love

ಬೆಂಗಳೂರು: ಕಾಂಗ್ರೆಸ್ ಸೇರುವಂತೆ ಹಾಗು ಕಾಂಗ್ರೆಸ್ ಅಭ್ಯರ್ಥಿಯಾಗಿ ಲೋಕಸಭಾ ಚುನಾವಣೆಗೆ ಸ್ಪರ್ಧೆ ಮಾಡುವಂತೆ ಆಹ್ವಾನ ಬಂದಿದ್ದು ನಿಜ ಎನ್ನುವುದನ್ನು ಶಾಸಕ ಎಸ್ ಟಿ ಸೋಮಶೇಖರ್ ಒಪ್ಪಿಕೊಂಡಿದ್ದಾರೆ.

ಕಾಂಗ್ರೆಸ್​ಗೆ ಹೋಗಿ ಭವಿಷ್ಯ ಹಾಳು ಮಾಡಿಕೊಳ್ಳದಂತೆ ಅವರಿಗೆ ಹೇಳಿದ್ದೇನೆ, ಅವರೂ ಕೂಡ ಪಕ್ಷ ತೊರೆಯುವುದಿಲ್ಲ ಎಂದೇ ಸ್ಪಷ್ಟಪಡಿಸಿದ್ದಾರೆ ಎಂದು ಮಾಜಿ ಡಿಸಿಎಂ ಆರ್ ಅಶೋಕ್ ತಿಳಿಸಿದ್ದಾರೆ.

ಆಪರೇಷನ್ ಹಸ್ತ ಪ್ರಯತ್ನಗಳ ಹಿನ್ನೆಲೆಯಲ್ಲಿ ಮಾತುಕತೆ ನಡೆಸಲು ಆಗಮಿಸುವಂತೆ ಮಾಜಿ ಡಿಸಿಎಂ ಆರ್ ಅಶೋಕ್ ಸೂಚನೆಯಂತೆ ಶಾಸಕ ಎಸ್ ಟಿ ಸೋಮಶೇಖರ್ ಜಯನಗರದಲ್ಲಿರುವ ಅಶೋಕ್ ನಿವಾಸಕ್ಕೆ ಭೇಟಿ ನೀಡಿದ್ದರು. ಕ್ಷೇತ್ರದಲ್ಲಿ ತಮಗಾಗುತ್ತಿರುವ ಸಮಸ್ಯೆಗಳ ಕುರಿತು ಚರ್ಚೆ ನಡೆಸಿದರು. ನಂತರ ಮಾಧ್ಯಮಗೋಷ್ಟಿ ನಡೆಸಿ ವಿವರ ನೀಡಿದ ಅಶೋಕ್, “ಎಸ್ ಟಿ ಸೋಮಶೇಖರ್ ಬಂದು ಭೇಟಿ ಮಾಡಿದರು. ಅವರೊಂದಿಗೆ ಒಂದು ಗಂಟೆ ಚರ್ಚೆ ಮಾಡಿದ್ದೇನೆ. ಯಶವಂತಪುರ ಕ್ಷೇತ್ರದಲ್ಲಿ ವಾಟ್ಸಪ್ ಗ್ರೂಪ್ ಮಾಡಿಕೊಂಡು ತೊಂದರೆ ಕೊಡುತ್ತಿದ್ದಾರೆ, ನನ್ನ ವಿರೋಧ ಮಾಡುವವರೆಲ್ಲಾ ಸೇರಿಕೊಂಡು ನಾವೇ ಕಾರ್ಪೊರೇಷನ್ ಕ್ಯಾಂಡಿಡೇಟ್ ಎನ್ನುತ್ತಿದ್ದಾರೆ”.

“ಇದೆಲ್ಲಾ ನೋಡಿದ ನಂತರ ಕಾರ್ಪೊರೇಷನ್ ಟಿಕೆಟ್ ಸಿಗುತ್ತದೆ ಎಂದು ಬೆಂಬಲಿಗರು ಕಾಂಗ್ರೆಸ್​ಗೆ ಹೋಗಿದ್ದಾರೆ. ಆದರೆ ನಾನು ಹೋಗುವುದಿಲ್ಲ ಎಂದು ಸೋಮಶೇಖರ್ ಹೇಳಿದ್ದಾರೆ. ಅವರು ಆತುರದ ನಿರ್ಧಾರ ತೆಗೆದುಕೊಳ್ಳುವುದಿಲ್ಲ ಎಂದುಕೊಂಡಿದ್ದೇನೆ. ಸವಿಸ್ತಾರವಾಗಿ ಮಾತನಾಡಿದ್ದೇನೆ, ಚುನಾವಣೆ ಎಂದರೆ ಏನು? ಮತದಾರರ ಮೇಲೆ ಏನು ಪರಿಣಾಮ ಎಂದು ತಿಳಿಸಿದ್ದೇನೆ. ಪಕ್ಷ ಬಿಡುವುದಿಲ್ಲ ಎಂದರೂ, ಸ್ಥಳೀಯ ಸಮಸ್ಯೆ ಇದೆ ಎಂದು ಹೇಳಿದ್ದಾರೆ. ಒಂದು ರೀತಿ ಸುಂಟರಗಾಳಿ ಎದ್ದಿದೆ, ಇದು ನಮಗೆ ಎಚ್ಚರಿಕೆ ಗಂಟೆ, ಇದೆಲ್ಲವನ್ನೂ ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹಾಗು ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಜಿ ವಿ ರಾಜೇಶ್ ಅವರ ಗಮನಕ್ಕೆ ತರುತ್ತೇನೆ” ಎಂದರು.

ಲೋಕಸಭೆ ಚುನಾವಣೆಗೆ ಟಿಕೆಟ್: ಕಾಂಗ್ರೆಸ್​ನವರು ನಮ್ಮ ಪಕ್ಷಕ್ಕೆ ಬನ್ನಿ ಲೋಕಸಭೆ ಚುನಾವಣೆಗೆ ಟಿಕೆಟ್ ಕೊಡುತ್ತೇವೆ ಅಂತ ಹೇಳಿರೋದಾಗಿ ನನ್ನ ಮುಂದೆ ಸೋಮಶೇಖರ್ ಒಪ್ಪಿಕೊಂಡರು, ಕಾಂಗ್ರೆಸ್ ನವರು ಆಹ್ವಾನ ಮಾಡಿದ್ದು ನಿಜ‌ ಅಂತ ಹೇಳಿದ್ದಾರೆ. ಆದರೆ ಯಾವುದೇ ಕಾರಣಕ್ಕೂ ಲೋಕಸಭೆ ಅಭ್ಯರ್ಥಿ ಆಗಲ್ಲ ಅಂತ ಸೋಮಶೇಖರ್ ಹೇಳಿದ್ದಾರೆ. ಕ್ಷೇತ್ರದ ಸಮಸ್ಯೆ ಬಗೆಹರಿಸುವಂತೆ ತಿಳಿಸಿದ್ದಾರೆ. ಅವರ ಕ್ಷೇತ್ರದಲ್ಲಿ ಯಾರ್ಯಾರಿಂದ ಸಮಸ್ಯೆ ಆಗುತ್ತಿದೆ ಅಂತಲೂ ತಿಳಿಸಿದ್ದಾರೆ. ಐದಾರು ಜನರ ಹೆಸರು ಹೇಳಿದ್ದಾರೆ. ಅವರ ಜತೆ ಸಮಗ್ರವಾಗಿ ಚರ್ಚೆ ಮಾಡಿದ್ದೇನೆ, ನನಗೆ ಗೊತ್ತಿರುವಂತೆ ಅವರು ಕಾಂಗ್ರೆಸ್​ಗೆ ಹೋಗಲ್ಲ. ಅವರ ಕ್ಷೇತ್ರದಲ್ಲಿ ಅವರ ವಿರುದ್ಧ ಕೆಲವರು ಅಪಪ್ರಚಾರ ನಡೆಸ್ತಿದಾರೆ ಅಂತ ಹೇಳಿದರು. ಅದೆಲ್ಲವನ್ನು ಪರಿಹರಿಸುವ ಭರವಸೆ ನೀಡಿ, ನಾನು ಅವರಿಗೆ ಪಕ್ಷದ ಮುಖಂಡನಾಗಿಯೂ, ಸ್ನೇಹಿತನಾಗಿಯೂ ಮಾತಾಡಿದ್ದೇನೆ. ಕಾಂಗ್ರೆಸ್​ಗೆ ಹೋಗಿ ಭವಿಷ್ಯ ಹಾಳು ಮಾಡಿಕೊಳ್ಳದಂತೆ ಹೇಳಿದ್ದೇನೆ. ಅವರು ಪಕ್ಷ ಬಿಡಲ್ಲ ಎಂದಿದ್ದಾರೆ ಎಂದು ಅಶೋಕ್​ ಸ್ಪಷ್ಟಪಡಿಸಿದರು.


Spread the love

About Laxminews 24x7

Check Also

ಜನರಲ್ಲಿ ವೈಚಾರಿಕತೆ, ವೈಜ್ಞಾನಿಕತೆ ಬೆಳೆಯದಿದ್ದರೆ, ಕೇವಲ ಮೌಢ್ಯ ನಿಷೇಧ ಕಾನೂನಿನ ಮೂಲಕ ನಿರೀಕ್ಷಿತ ಬದಲಾವಣೆ ಸಾಧ್ಯವಿಲ್ಲ ಎಂದ ಸಿಎಂ

Spread the loveಬೆಂಗಳೂರು: ”ದ್ವಿಭಾಷಾ ಸೂತ್ರ ನನ್ನ ಅಭಿಪ್ರಾಯವಾಗಿದೆ. ಅದನ್ನು ಸರ್ಕಾರದ ಅಭಿಪ್ರಾಯ ಮಾಡುವ ದಿಕ್ಕಿನಲ್ಲಿ ಪ್ರಯತ್ನಿಸುತ್ತೇನೆ” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ