ಚಂದ್ರನ ಅಂಗಳಕ್ಕೆ ವಿಕ್ರಂ ಲ್ಯಾಂಡರ್ ಕಾಲಿಟ್ಟಿರುವುದು ಎಲ್ಲೆಡೆ ಸಂಭ್ರಮಾಚರಣೆಗೆ ಕಾರಣವಾಗಿದೆ.

Spread the love

ಬೆಳಗಾವಿ : ಇಸ್ರೋದ ಬಹುನಿರೀಕ್ಷಿತ ಚಂದ್ರಯಾನ-3 ವಿಕ್ರಂ ಲ್ಯಾಂಡರ್ ಸುರಕ್ಷಿತವಾಗಿ ಚಂದ್ರನ ಅಂಗಳಕ್ಕೆ ಇಳಿಯುತ್ತಿದಂತೆ ಬೆಳಗಾವಿ ಹಾಗು ಮೈಸೂರಿನಲ್ಲಿ ಜನರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.

 

ಬೆಳಗಾವಿ ಶಿವಬಸವ ನಗರದ ಡಾ. ಶಿವಬಸವ ಸ್ವಾಮೀಜಿ ವೃತ್ತದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು. ನಾಗನೂರು ರುದ್ರಾಕ್ಷಿ ಮಠದ ಡಾ. ಅಲ್ಲಮಪ್ರಭು ಸ್ವಾಮೀಜಿ ಪಾಲ್ಗೊಂಡಿದ್ದರು. ಭಾರತ ಮಾತಾಕಿ ಜೈ ಮತ್ತು ಇಸ್ರೋ ವಿಜ್ಞಾನಿಗಳಿಗೆ ಜಯವಾಗಲಿ ಎಂಬ ಘೋಷಣೆಗಳು ಕೇಳಿಬಂದವು. ಸಾರ್ವಜನಿಕರಿಗೆ ಸಿಹಿ ಹಂಚಿ ಸ್ವಾಮೀಜಿ ಸಂಭ್ರಮಿಸಿದರು.

ಈಟಿವಿ ಭಾರತ ಜೊತೆಗೆ ಮಾತನಾಡಿ ಹರ್ಷ ವ್ಯಕ್ತಪಡಿಸಿದ ಡಾ. ಅಲ್ಲಮಪ್ರಭು ಸ್ವಾಮೀಜಿ, ಭಾರತ ದೇಶವನ್ನು ವಿಶ್ವಗುರುವನ್ನಾಗಿ ಮಾಡಿದ ಶ್ರೇಯಸ್ಸು ಇಸ್ರೋ ವಿಜ್ಞಾನಿಗಳಿಗೆ ಸಲ್ಲುತ್ತದೆ. ವಿಶ್ವದಲ್ಲೇ ಮೊಟ್ಟ ಮೊದಲ ಬಾರಿಗೆ ಚಂದ್ರನ ಅಂಗಳದಲ್ಲಿ ಅದರಲ್ಲೂ‌ ದಕ್ಷಿಣ ಧ್ರುವದಲ್ಲಿ ಯಾವುದೇ ದೇಶ ಮಾಡದ ಸಾಧನೆಯನ್ನು ಇಸ್ರೋ ಮಾಡಿದೆ ಎಂದರು.

ಡಾ. ಸ.ಜ.ನಾಗಲೋಟಿಮಠ ವಿಜ್ಞಾನ ಕೇಂದ್ರದ ಯೋಜನಾ ಸಹಾಯಕ ರಾಜಶೇಖರ ಪಾಟೀಲ ಮಾತನಾಡಿ, ಜಗತ್ತಿನ 195 ರಾಷ್ಟ್ರಗಳು ಮಾಡದ ಸಾಧನೆಯನ್ನು ನಮ್ಮ ಭಾರತ ದೇಶದ ಹೆಮ್ಮೆಯ ಇಸ್ರೋ ಸಂಸ್ಥೆ ಮಾಡಿ ವಿಶ್ವದಾಖಲೆ ನಿರ್ಮಿಸಿದೆ. ಅವರಿಗೆ ಎಲ್ಲ ಭಾರತೀಯರ ಪರವಾಗಿ ಹೃದಯಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದು ಹೇಳಿದರು.

ಕರವೇ ಜಿಲ್ಲಾಧ್ಯಕ್ಷ ದೀಪಕ ಗುಡಗನಟ್ಟಿ ಮಾತನಾಡಿ, ಭಾರತಕ್ಕೆ ಇಷ್ಟು ದೊಡ್ಡ ಜಯ ತಂದು ಕೊಟ್ಟಿರುವ ಇಸ್ರೋ ವಿಜ್ಞಾನಿಗಳು ಮತ್ತು ಅವರ ತಂಡಕ್ಕೆ ಅಭಿನಂದನೆಗಳು. ಈ ದಿನ ಸುವರ್ಣಾಕ್ಷರದಲ್ಲಿ ಬರೆದಿಡುವಂಥದ್ದು. ಭಾರತ ವಿಶ್ವಗುರು ಎಂದು ನಮ್ಮ ವಿಜ್ಞಾನಿಗಳು ಸಾಬೀತು ಪಡಿಸಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.

ಚಂದ್ರನ ಮೇಲೆ ವಿಕ್ರಮ ಲ್ಯಾಂಡಿಂಗ್ ವೀಕ್ಷಣೆಗೆ ಬೆಳಗಾವಿ ನಗರದ ಡಾ.ಸ.ಜ.ನಾಗಲೋಟಿಮಠ ವಿಜ್ಞಾನ ಕೇಂದ್ರದಲ್ಲಿ ಮಕ್ಕಳು ಹಾಗೂ ಖಗೋಳ ಆಸಕ್ತರಿಗೆ ಎಲ್​ಇಡಿ ಸ್ಕ್ರೀನ್ ಮೂಲಕ ನೇರ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿತ್ತು. ಶಾಲಾ ಮಕ್ಕಳು ಭಾಗವಹಿಸಿದ್ದರು. ಲ್ಯಾಂಡರ್‌ ಚಂದ್ರನಲ್ಲಿ ಕಾಲಿಡುತ್ತಿದ್ದಂತೆ ವಿದ್ಯಾರ್ಥಿಗಳ ಸಂತಸಕ್ಕೆ ಪಾರವೇ ಇರಲಿಲ್ಲ. ಎಲ್ಲರೂ ಚಪ್ಪಾಳೆ ತಟ್ಟಿ ಸಂಭ್ರಮಿಸಿದರು.

ಚಂದ್ರಯಾನ-3ರ ತಂಡದಲ್ಲಿ ಬೆಳಗಾವಿ ಜಿಲ್ಲೆಯ ಇಬ್ಬರು ವಿಜ್ಞಾನಿಗಳಾದ ಖಾನಾಪುರ ತಾಲೂಕಿನ ಅನಗಡಿ ಗ್ರಾಮದ ಪ್ರಕಾಶ ನಾರಾಯಣ ಪಡಣೇಕರ್ ಮತ್ತು ಗೋಕಾಕ ತಾಲೂಕಿನ ಮಮದಾಪುರದ ಶಿವಾನಂದ ಮಲ್ಲಪ್ಪ ಕಮತ ಕಾರ್ಯ ನಿರ್ವಹಿಸಿದ್ದಾರೆ. ಬೆಳಗಾವಿಯ ಸರ್ವೇ ಕಂಟ್ರೋಲ್ಸ್ ಏರೋಸ್ಪೇಸ್ ಇಂಡಿಯಾ ಲಿಮಿಟೆಡ್ ಕಂಪನಿ ಸಿದ್ಧಪಡಿಸಿದ ಬಿಡಿಭಾಗಗಳು ಚಂದ್ರಯಾನ-3ರಲ್ಲಿ ಪ್ರಮುಖ ಮಾತ್ರ ವಹಿಸಿರುವುದು ಜಿಲ್ಲೆಗೆ ಹೆಮ್ಮೆಯ ಸಂಗತಿಯಾಗಿದೆ.


Spread the love

About Laxminews 24x7

Check Also

ಕರೆಂಟ್ ಶಾಕ್ ಹೊಡೆದು ಅಣ್ಣ-ತಮ್ಮ ಇಬ್ಬರೂ ಸಾವು

Spread the love ವಿಜಯಪುರ: ದ್ರಾಕ್ಷಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ವಿದ್ಯುತ್ ಪ್ರವಹಿಸಿ ಅಣ್ಣ-ತಮ್ಮ ಇಬ್ಬರೂ ಸಾವನ್ನಪ್ಪಿರುವ ದಾರುಣ ಘಟನೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ