ಗಂಗಾವತಿ(ಕೊಪ್ಪಳ): ತುಂಗಭದ್ರಾ ಎಡದಂಡೆ ಕಾಲುವೆ ವ್ಯಾಪ್ತಿಯಲ್ಲಿನ ವಿತರಣಾ ಕಾಲುವೆಗಳ ಸಮೀಪ ಅನಧಿಕೃತವಾಗಿ ಪೈಪ್ಲೈನ್ ಅಳವಡಿಸಿ, ನೀರು ಕಳ್ಳತನವಾಗುತ್ತಿರುವ ಪ್ರದೇಶಗಳನ್ನು ಪತ್ತೆ ಹಚ್ಚಿದ ವಿವಿಧ ಇಲಾಖೆಯ ಅಧಿಕಾರಿಗಳ ತಂಡ ಇಂದು ಪೈಪ್ಲೈನ್ಗಳ ತೆರವು ಕಾರ್ಯಾಚರಣೆ ನಡೆಸಿತು.
ನೀರು ಕಳ್ಳತನ ತಡೆಯುವ ಉದ್ದೇಶಕ್ಕೆ ಕೊಪ್ಪಳ ಜಿಲ್ಲಾಧಿಕಾರಿ, ತುಂಗಭದ್ರಾ ಅಚ್ಚುಕಟ್ಟು ಪ್ರಾಧಿಕಾರದ ಮುಖ್ಯ ಅಭಿಯಂತರರು ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳಿಂದ ಕೂಡಿದ ಕಾರ್ಯಾಚರಣೆ ಪಡೆ ರಚಿಸಿದ್ದಾರೆ.
ಈ ಹಿನ್ನೆಲೆ ಇಲ್ಲಿನ ವಡ್ಡರಹಟ್ಟಿ ನಂಬರ್-2 ವಿಭಾಗದ ವ್ಯಾಪ್ತಿಗೆ ಒಳಪಡುವ 31ನೇ ವಿತರಣಾ ಕಾಲುವೆ ಸಮೀಪ ಅನಧಿಕೃತ ಪೈಪ್ಲೈನ್ ಅಳವಡಿಸಿರುವುದನ್ನು ಪತ್ತೆ ಹಚ್ಚಿದ ಅಧಿಕಾರಿಗಳ ತಂಡ ನೀರಾವರಿ ಇಲಾಖೆಯ ಕಾರ್ಯಪಾಲಕ ಎಂಜಿನೀಯರ್ ಎಂಎಸ್ ಗೋಡೆಕರ್ ನೇತೃತ್ವದಲ್ಲಿ ಪೊಲೀಸ್, ಕಂದಾಯ, ಲೋಕೋಪಯೋಗಿ, ಪಂಚಾಯತ್ ರಾಜ್ ಇಲಾಖೆಯ ಅಧಿಕಾರಿಗಳ ಸಮ್ಮುಖದಲ್ಲಿ ಜೆಸಿಬಿ ಸಹಾಯದಿಂದ ತೆರವು ಕಾರ್ಯಾಚರಣೆ ಮಾಡಲಾಯಿತು.
ಮತ್ತೊಂದೆಡೆ, ಕನಕಗಿರಿ ತಾಲೂಕು ವ್ಯಾಪ್ತಿಗೆ ಒಳಪಡುವ ಜೀರಾಳ ಕಲ್ಗುಡಿ ಮತ್ತು ಚಿಕ್ಕಡಂಕನಕಲ್ ಗ್ರಾಮದ ಸಮೀಪ ತುಂಗಭದ್ರಾ ಎಡದಂಡೆ ಕಾಲುವೆಗೆ ಅನಧಿಕೃತ ಪೈಪ್ಲೈನ್ ಅಳವಡಿಸಿ ನೀರು ಕದಿಯಲಾಗುತ್ತಿರುವ ಪ್ರಕರಣವನ್ನು ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ. ಈ ಹಿನ್ನೆಲೆ ಕನಕಗಿರಿ ತಹಶೀಲ್ದಾರ್ ವಿಶ್ವನಾಥ್ ಮುರಡಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ತಹಶೀಲ್ದಾರ್ ನೇತೃತ್ವದಲ್ಲಿ ಅಧಿಕಾರಿಗಳ ತಂಡ, ಅನಧಿಕೃತ ಪೈಪ್ಲೈನ್ ನಾಶಪಡಿಸುವ ಕಾರ್ಯಾಚರಣೆ ಮಾಡಿದರು. ಸುಮಾರು ಹತ್ತಕ್ಕೂ ಹೆಚ್ಚು ಪ್ರಕರಣ ಪತ್ತೆಯಾಗಿದ್ದು, ಈ ಬಗ್ಗೆ ದೂರು ದಾಖಲಿಸಲಾಗುವುದು ಎಂದು ತಹಸೀಲ್ದಾರ್ ವಿಶ್ವನಾಥ್ ತಿಳಿಸಿದ್ದಾರೆ.