ಮುಂಬೈ (ಮಹಾರಾಷ್ಟ್ರ): ರೆಸ್ಟೋರೆಂಟ್‌ವೊಂದರಲ್ಲಿ ಪೂರೈಕೆ ಮಾಡಿದ್ದ ಚಿಕನ್ ಕರಿಯಲ್ಲಿ ಸತ್ತ ಇಲಿ ಮರಿ ಸಿಕ್ಕಿರುವ ಘಟನೆ ಮಹಾರಾಷ್ಟ್ರ ರಾಜಧಾನಿ ಮುಂಬೈನಲ್ಲಿ ನಡೆದಿದೆ.
ಈ ಕುರಿತು ಗ್ರಾಹಕರು ನೀಡಿದ ದೂರಿನ ಮೇರೆಗೆ ಪೊಲೀಸರು ರೆಸ್ಟೋರೆಂಟ್ ಮ್ಯಾನೇಜರ್ ಸೇರಿದಂತೆ ಮೂವರನ್ನು ಬಂಧಿಸಿ, ನಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ.
ಮಧ್ಯಪ್ರದೇಶ ಮೂಲದ ಅನುರಾಗ್ ದಿಲೀಪ್ ಸಿಂಗ್ ಎಂಬವರು ಗೋರೆಗಾಂವ್ ಪಶ್ಚಿಮ ವಿಭಾಗದಲ್ಲಿರುವ ಖಾಸಗಿ ಬ್ಯಾಂಕ್‌ನಲ್ಲಿ ಹಿರಿಯ ವ್ಯವಸ್ಥಾಪಕರಾಗಿ ಕೆಲಸ ಮಾಡುತ್ತಿದ್ದಾರೆ. ಆಗಸ್ಟ್ 13ರಂದು ತಮ್ಮ ಸ್ನೇಹಿತ ಅಮೀನ್ ಖಾನ್ ಅವರೊಂದಿಗೆ ಬಾಂದ್ರಾದ ಪಾಲಿ ನಾಕಾ ಪ್ರದೇಶದಲ್ಲಿರುವ ಪಾಪಾ ಪಾಂಚೋ ಡಾ ಢಾಬಾ ರೆಸ್ಟೋರೆಂಟ್‌ಗೆ ಹೋಗಿದ್ದರು. ಒಂದು ಪ್ಲೇಟ್ ಮಟನ್ ಮತ್ತು ಚಿಕನ್ ಕರಿ ಆರ್ಡರ್ ಮಾಡಿದ್ದರು. ಊಟ ಮಾಡುವಾಗ ಚಿಕನ್ ಪ್ಲೇಟ್‌ನಲ್ಲಿ ಸತ್ತ ಮರಿ ಇಲಿ ಕಂಡುಬಂದಿದೆ.
ಇದರಿಂದ ಆಘಾತಗೊಂಡ ಅನುರಾಗ್ ಸಿಂಗ್ ಢಾಬಾದ ಮ್ಯಾನೇಜರ್ಗೆ ಪ್ರಶ್ನೆ ಮಾಡಿದ್ದಾರೆ. ಆಗ ಸ್ಪಷ್ಟ ಉತ್ತರವನ್ನು ಅವರು ಕೊಟ್ಟಿಲ್ಲ. ಹೀಗಾಗಿ ಬಾಂದ್ರಾ ಪೊಲೀಸ್ ಠಾಣೆಗೆ ಅನುರಾಗ್ ದೂರು ನೀಡಿದ್ದಾರೆ. ಅದರಂತೆ ಮೃತ ಇಲಿಯನ್ನು ಆಹಾರದಲ್ಲಿ ನೀಡಿ ಪಿರ್ಯಾದಿದಾರರ ಪ್ರಾಣಕ್ಕೆ ಅಪಾಯ ತಂದದ ಆರೋಪದ ಮೇಲೆ ರೆಸ್ಟೋರೆಂಟ್ ಮ್ಯಾನೇಜರ್, ಅಡುಗೆಯವರು ಮತ್ತು ಚಿಕನ್ ಪೂರೈಕೆದಾರರ ವಿರುದ್ಧ ಭಾರತೀಯ ದಂಡ ಸಂಹಿತೆಯ 272, 336 ಮತ್ತು 34ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಬಾಂದ್ರಾ ಪೊಲೀಸ್ ಠಾಣೆಯ ಹಿರಿಯ ಪೊಲೀಸ್ ಇನ್ಸ್‌ಪೆಕ್ಟರ್ ಸಂಜಯ್ ಮರಾಠೆ ಪ್ರತಿಕ್ರಿಯಿಸಿ, ”ರೆಸ್ಟೋರೆಂಟ್ನಲ್ಲಿ ಊಟ ಮಾಡುತ್ತಿದ್ದಾಗ ಸತ್ತ ಇಲಿ ಮರಿ ಪತ್ತೆಯಾಗಿದೆ. ಮೊದಲಿಗೆ ಗ್ರಾಹಕರು ಅದನ್ನು ಗಮನಿಸಿಲ್ಲ. ಹಾಗೆ ತಿನ್ನುತ್ತಿದ್ದಾಗ ಮೃತ ಇಲಿ ಮರಿ ಎಂಬುವುದು ಖಚಿತವಾಗಿದೆ. ಆದ್ದರಿಂದ ರೆಸ್ಟೋರೆಂಟ್‌ನ ಮ್ಯಾನೇಜರ್ ವಿವಿಯನ್ ಆಲ್ಬರ್ಟ್ ಸಿಕ್ವೆರಾ ಅವರಿಗೆ ಗ್ರಾಹಕರು ಪ್ರಶ್ನಿಸಿದ್ದಾರೆ. ಆದರೆ, ಮ್ಯಾನೇಜರ್ ಅಸ್ಪಷ್ಟ ಉತ್ತರ ನೀಡಿದ್ದಾರೆ. ಆದ್ದರಿಂದ ಈ ಕುರಿತು ಗ್ರಾಹಕರು ಠಾಣೆಗೆ ಬಂದು ದೂರು ದಾಖಲಿಸಿದ್ದಾರೆ” ಎಂದು ಖಚಿತಪಡಿಸಿದ್ದಾರೆ.