Breaking News

ಶಿಕಾರಿಪುರದ ನಳಿನಕೊಪ್ಪ ಶಾಲೆಯಲ್ಲಿ‌ ನಡೆಯದ ಸ್ವಾತಂತ್ರ್ಯ ದಿನಾಚರಣೆ: ಶಾಲೆಯ ಮುಖ್ಯ ಶಿಕ್ಷಕಿ ಅಮಾನತು

Spread the love

ಶಿವಮೊಗ್ಗ: ಇಂದು ದೇಶಾದ್ಯಂತ ಎಲ್ಲೆಡೆ 77ನೇ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮ ಕಳೆಗಟ್ಟಿದೆ.

ಸರ್ಕಾರಿ ಶಾಲೆ, ಕಾಲೇಜು, ಕಚೇರಿಗಳಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆ ಮಾಡಲಾಗಿದೆ. ಆಯಾ ಜಿಲ್ಲೆಗಳಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಧ್ವಜಾರೋಹಣ ನೆರವೇರಿಸಿ ಭಾಷಣ ಮಾಡಿದ್ದಾರೆ. ಆದ್ರೆ ಜಿಲ್ಲೆಯ ಶಿಕಾರಿಪುರ ತಾಲೂಕಿನ ಎಳನೀರು‌ಕೊಪ್ಪ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸದೆ ನಿರ್ಲಕ್ಷ್ಯ ವಹಿಸಿರುವ ಆರೋಪ ಕೇಳಿಬಂದಿದೆ.

ಸ್ವಾತಂತ್ರ್ಯ ದಿನಾಚರಣೆಯನ್ನು ಎಲ್ಲಾ ಸರ್ಕಾರಿ‌ ಶಾಲೆ, ಕಾಲೇಜು ಸೇರಿದಂತೆ ಸರ್ಕಾರಿ ಇಲಾಖೆಯ ಕಚೇರಿಯಲ್ಲಿ ಕಡ್ಡಾಯವಾಗಿ ಆಚರಿಸಬೇಕೆಂಬ ನಿಯಮವಿದೆ. ಎಳನೀರು ಕೊಪ್ಪ ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ ಆಚರಿಸದೆ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಶಿಕ್ಷಕರು ವಿದ್ಯಾರ್ಥಿಗಳನ್ನು ಶಾಲೆಗೆ ಕರೆಯಿಸಿ ಇಂದು ಬೆಳಗ್ಗೆಯೇ ಸ್ವಾತಂತ್ರ್ಯ ದಿನಾಚರಣೆ ಆಚರಿಸಬೇಕಿತ್ತು. ಈ ಮೂಲಕ ವಿದ್ಯಾರ್ಥಿಗಳಿಗೆ ದೇಶ ಭಕ್ತಿ, ರಾಷ್ಟ್ರ ಧ್ವಜ, ಸ್ವಾತಂತ್ರ್ಯ ಹೋರಾಟದ ಕುರಿತು ಮಾಹಿತಿ ಒದಗಿಸಿ, ಧ್ವಜಾರೋಹಣ ನಡೆಸಬೇಕಿತ್ತು. ಈ ಎಲ್ಲಾ‌ ಕಾರ್ಯವನ್ನು ಮಾಡದೆ ನಿರ್ಲಕ್ಷ್ಯ ವಹಿಸಲಾಗಿದೆ. ಜೊತೆಗೆ ಶಾಲಾ ಎಸ್​ಡಿಎಂಸಿ ಸದಸ್ಯರು ಸಹ ಸ್ವಾತಂತ್ರ್ಯ ದಿನಾಚರಣೆಗೆ ಹಾಜರಾಗಿಲ್ಲ ಎಂದು ತಿಳಿದುಬಂದಿದೆ.

ಗ್ರಾಮಸ್ಥರಿಂದ ಬಿಇಒಗೆ ದೂರು: ಎಳನೀರು ಕೊಪ್ಪದ ಪ್ರಕಾಶ್ ನಾಯ್ಕ ಎಂಬುವರು ಇಂದು ಬೆಳಗ್ಗೆ ಶಿಕಾರಿಪುರ ಬಿಇಒ ಜಿ ಎಸ್ ಶಶಿಧರ್ ಅವರಿಗೆ ದೂರವಾಣಿ ಮೂಲಕ ದೂರು ನೀಡಿದ್ದಾರೆ. ಈ ಹಿನ್ನೆಲೆ ಬಿಇಒ ಅವರು ಗ್ರಾಮದ ಶಾಲೆಗೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

ಗ್ರಾಮಕ್ಕೆ ಕ್ಷೇತ್ರ ಶಿಕ್ಷಣಾಧಿಕಾರಿ ಭೇಟಿ : ಬಿಇಒಗ್ರಾಮಕ್ಕೆ ಭೇಟಿ ನೀಡಿದ ವೇಳೆ ಶಾಲಾ ಮುಖ್ಯ ಶಿಕ್ಷಕಿ ಲಲಿತಾ ಅವರಿಗೆ ಫೋನ್​ ಮಾಡಿ ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ ಹಾಗೂ ಧ್ವಜಾರೋಹಣ ನಡೆಸದ ಬಗ್ಗೆ ಮಾಹಿತಿ ಕೇಳಿದ್ದಾರೆ. ಅದಕ್ಕೆ ಉತ್ತರಿಸಿರುವ ಅವರು, ಶಾಲೆಯ ಧ್ವಜಸ್ತಂಭ ಶಿಥಿಲವಾಗಿದೆ. ಇದರಿಂದ ಧ್ವಜಾರೋಹಣ ನಡೆಸಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಮುಖ್ಯ ಶಿಕ್ಷಕಿ ಅಮಾನತು: ಬಿಇಒ ಅವರು ಸ್ಥಳ ಪರಿಶೀಲನೆ ನಡೆಸಿದಾಗ ಶಾಲೆಯ ಧ್ವಜಸ್ತಂಭ ಚೆನ್ನಾಗಿಯೇ ಇದ್ದಿದ್ದು ಕಂಡುಬಂದಿದೆ. ಅಲ್ಲದೇ, ಧ್ವಜಾರೋಹಣಕ್ಕೆ ಯೋಗ್ಯವಾಗಿರುವುದು ಗೊತ್ತಾಗಿದೆ. ಹೀಗಾಗಿ ಸರ್ಕಾರಿ ನಿಯಮ ಪಾಲಿಸದ ಹಿನ್ನೆಲೆ ಶಿಕಾರಿಪುರ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಅವರು, ಶಾಲಾ‌ ಮುಖ್ಯ ಶಿಕ್ಷಕಿ ಲಲಿತಾ ಅವರನ್ನು ಅಮಾನತು ಮಾಡಿರುವುದಾಗಿ ಈಟಿವಿ ಭಾರತ ಕ್ಕೆ ತಿಳಿಸಿದ್ದಾರೆ.


Spread the love

About Laxminews 24x7

Check Also

ಬೆಳಗಾವಿ ಜಲಾಶಯಗಳಲ್ಲಿ ಜೀವಕಳೆ

Spread the love ಬೆಳಗಾವಿ: ಜಿಲ್ಲೆಯಲ್ಲಿ ಈ ಬಾರಿ ಪೂರ್ವ ಮುಂಗಾರು ಉತ್ತಮವಾಗಿದೆ. ಜೂನ್‌ ಅಂತ್ಯದವರೆಗೆ ಮುಂಗಾರು 286.46 ಮಿ.ಮೀ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ