ಕಾರವಾರ (ಉತ್ತರ ಕನ್ನಡ) : 7-8 ತಿಂಗಳಲ್ಲಿ ಸರ್ಕಾರ ಬೀಳಲಿದೆ ಎಂದು ಬಿಜೆಪಿ ಶಾಸಕ ಬಸನಗೌಡ ಯತ್ನಾಳ್ ಭವಿಷ್ಯ ಹೇಳಿದ್ದರು.
ಅವರು ಏನಾದರೂ ಹೇಳಬೇಕೆಂದು ಹೇಳಿಕೆ ನೀಡುತ್ತಾರೆ. ಅವರ ಮನಸ್ಥಿತಿ ಸರಿ ಇಲ್ಲ ಎಂದು ಮೀನುಗಾರಿಕೆ ಇಲಾಖೆ ಸಚಿವ ಮಂಕಾಳು ವೈದ್ಯ ತಿರುಗೇಟು ನೀಡಿದ್ದಾರೆ.
ಬಿಜೆಪಿ ಸರ್ಕಾರವೇ ಬೀಳುವುದಾಗಿ 5 ವರ್ಷದ ಹಿಂದೆ ಹೇಳಿದ್ದರು. ಆದರೆ ಸರ್ಕಾರವನ್ನು ಬೀಳಿಸಲು ಸಾಧ್ಯವಾಗಿಲ್ಲ. ಸಿಎಂ ಕುರ್ಚಿಗೆ ಒಂದೂವರೆ ಸಾವಿರ ಕೋಟಿ ನೀಡಬೇಕು ಎಂದಿದ್ದರು. ಅವರು ಏನಾದರು ಹೇಳಲೇಬೇಕೆಂದು ಏನೋ ಹೇಳಿಕೆ ಕೊಟ್ಟಿದ್ದಾರೆ. ಅವರ ಮಾತುಗಳನ್ನು ಕೇಳಬೇಡಿ. ಅವರ ಮನಸ್ಥಿತಿ ಸರಿಯಿಲ್ಲ ಎಂದು ಯತ್ನಾಳ್ ವಿರುದ್ಧ ವಾಗ್ದಾಳಿ ನಡೆಸಿದರು.
ಇನ್ನು 5 ವರ್ಷ ಸೇವೆ ಮಾಡುವುಕ್ಕೆ ನಮ್ಮ ಸರ್ಕಾರವನ್ನು ಜನರು ಆಯ್ಕೆ ಮಾಡಿದ್ದಾರೆ. ಯಾವುದೇ ಕಾರಣಕ್ಕೂ ನಮ್ಮ ಸರ್ಕಾರದಲ್ಲಿ ವ್ಯತ್ಯಾಸ ಆಗುವುದಿಲ್ಲ. ಯತ್ನಾಳ್ ಹಿಂದೆ ಏನು ಹೇಳಿದ್ರು, ಈಗ ಏನು ಹೇಳುತ್ತಿದ್ದಾರೆ ಎಂಬುದನ್ನು ಅವರು ಸ್ವಲ್ಪ ಯೋಚನೆ ಮಾಡಬೇಕು. ಅವರು ತಮ್ಮ ಮಾನಸಿಕ ಸ್ಥಿತಿ ಸರಿಮಾಡಿಕೊಳ್ಳುವುದು ಒಳ್ಳೆಯದು ಎಂದು ಸಚಿವ ಮಂಕಾಳು ವೈದ್ಯ ಟಾಂಗ್ ಕೊಟ್ಟಿದ್ದಾರೆ.
ಉಪೇಂದ್ರ ಅವರು ಮತ್ತೆ ಇಂತಹ ತಪ್ಪಾಗದಂತೆ ಎಚ್ಚರ ವಹಿಸಲಿ : ಕನ್ನಡದ ಸೂಪರ್ ಸ್ಟಾರ್ನಟ ಉಪೇಂದ್ರ ಅವರು ಆಕ್ಷೇಪಾರ್ಹ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಸಚಿವರು ಯಾವುದೇ ಸಂದರ್ಭದಲ್ಲಿ ಯಾವುದೇ ಸಮುದಾಯದವರೊಗೆ ಬೇಜಾರಾಗುವಂತೆ ಮಾತನಾಡಬಾರದು. ಉಪೇಂದ್ರ ಅವರ ಹೇಳಿಕೆಯನ್ನು ನಾನೂ ಕೂಡ ಖಂಡಿಸುತ್ತೇನೆ. ಒಂದು ಸಮುದಾಯ ಬದುಕಲು ಅವಕಾಶ ನೀಡುವುದು ಪ್ರತಿಯೊಬ್ಬರ ಜವಾಬ್ದಾರಿ. ನಾವೂ ಅವರ ಸಿನಿಮಾಗಳನ್ನು ನೋಡಿ ಬೆಳೆದವರು. ಅವರ ಒಳ್ಳೆಯ ಸಿನೆಮಾಗಳನ್ನು ಎಲ್ಲರೂ ಇಷ್ಟಪಡುತ್ತಾರೆ. ಏನೋ ತಪ್ಪಾಗಿದೆ, ಮುಂದೆ ಅದನ್ನು ಸರಿಪಡಿಸಿಕೊಂಡು ಹೋಗಲಿ ಎಂದರು.
ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ಕ್ರಮ : ಉತ್ತರಕನ್ನಡದಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಎಲ್ಲಿ ಬೇಗ ಆಗುತ್ತೆ ಅಲ್ಲಿಗೆ ಪ್ರಥಮ ಆದ್ಯತೆ ನೀಡಲು ತೀರ್ಮಾನಿಸಿದ್ದು, ಕಾರವಾರದ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿಯೇ ಮೊದಲು ಸೌಲಭ್ಯಗಳನ್ನು ಕಲ್ಪಿಸಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಮಾಡಲಾಗುವುದು. ಇನ್ನು ಕುಮಟಾ ಅಥವಾ ಹೊನ್ನಾವರದಲ್ಲೂ ಇನ್ನೊಂದು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಮಾಡುತ್ತೇವೆ. ಕುಮಟಾದಲ್ಲೇ ಆಗಬೇಕು ಎನ್ನುವ ಬೇಡಿಕೆ ಇದ್ದು, ಆಸ್ಪತ್ರೆ ಇಡೀ ಜಿಲ್ಲೆಗೆ ಬೇಕಾಗಿದೆ. ಸಾರ್ವಜನಿಕರ, ಮಾಧ್ಯಮದವರ ಸಲಹೆ, ಸೂಚನೆ ಅಗತ್ಯವಿದೆ. ಜಿಲ್ಲೆಯ ಹಿತದೃಷ್ಟಿಯಿಂದ ಏನು ಮಾಡಲು ಸಾಧ್ಯವಿದೆಯೋ ಅದನ್ನು ಖಂಡಿತ ಮಾಡುತ್ತೇವೆ ಎಂದು ಸಚಿವ ಮಂಕಾಳು ವೈದ್ಯ ತಿಳಿಸಿದರು.