ಬೆಳಗಾವಿ: ”ಬೆಳಗಾವಿಯಲ್ಲಿ ಆಗಸ್ಟ್ 29 ಅಥವಾ 30 ರಂದು ಗೃಹಲಕ್ಷ್ಮಿ ಯೋಜನೆಗೆ ಚಾಲನೆ ನೀಡುತ್ತೇವೆ” ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ. ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಇಂದು ಸ್ಥಳ ಪರಿಶೀಲನೆ ನಡೆಸಿ, ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ”ಕಾರ್ಯಕ್ರಮಕ್ಕಾಗಿ ಈ ಜಾಗ ಗುರುತಿಸಲಾಗಿದೆ. ರಾಹುಲ್ ಗಾಂಧಿ ಅವರೂ ಆಗಮಿಸುತ್ತಿದ್ದಾರೆ. ಒಂದು ಲಕ್ಷಕ್ಕೂ ಅಧಿಕ ಜನ ಭಾಗವಹಿಸುವ ನಿರೀಕ್ಷೆಯಿದೆ” ಎಂದರು.
”ಒಂದು ವಿಭಾಗದಲ್ಲಿ ಒಂದು ಗ್ಯಾರಂಟಿ ಯೋಜನೆಗೆ ಚಾಲನೆ ನೀಡಲಾಗಿದೆ. ಬೆಂಗಳೂರಿನಲ್ಲಿ ಶಕ್ತಿ ಯೋಜನೆ, ಕಲಬುರ್ಗಿಯಲ್ಲಿ ಗೃಹ ಜ್ಯೋತಿ ಯೋಜನೆಗೆ ಚಾಲನೆ ನೀಡಲಾಗಿತ್ತು. ಈಗ ಬೆಳಗಾವಿಯಲ್ಲಿ ಗೃಹಲಕ್ಷ್ಮಿ ಯೋಜನೆಗೆ ಚಾಲನೆ ನೀಡಲಾಗುವುದು. ಅನ್ನಭಾಗ್ಯ ಯೋಜನೆಗೆ ಮೈಸೂರಿನಲ್ಲಿ ಚಾಲನೆ ನೀಡಲು ನಿರ್ಧರಿಸಲಾಗಿದೆ. ಯುವನಿಧಿ ಯೋಜನೆಗೆ ಡಿಸೆಂಬರ್ ಇಲ್ಲವೇ ಜನವರಿಯಲ್ಲಿ ಪ್ರಾರಂಭಿಸಲಾಗುವುದು” ಎಂದು ಹೇಳಿದರು.
ಗೃಹಲಕ್ಷ್ಮಿ ಯೋಜನೆಯಲ್ಲಿ 1 ಕೋಟಿ 33 ಲಕ್ಷ ಕುಟುಂಬಗಳ ಪೈಕಿ ಈಗಾಗಲೇ 1 ಕೋಟಿ 6 ಲಕ್ಷ ನೋಂದಣಿಯಾಗಿದೆ. ಬಡವರು, ಮಹಿಳೆಯರಿಗೆ ಸಹಾಯ ಮಾಡುವ ಉದ್ದೇಶದಿಂದ ಈ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ” ಎಂದು ಸಿಎಂ ತಿಳಿಸಿದರು