ಬೆಂಗಳೂರು : ಪತಿಯೋರ್ವ ತನ್ನ ಪತ್ನಿಯನ್ನೇ ಬರ್ಬರವಾಗಿ ಹತ್ಯೆಗೈದಿರುವ ಘಟನೆ ವೈಟ್ ಫೀಲ್ಡ್ ಪೊಲೀಸ್ ಠಾಣಾ ವ್ಯಾಪ್ತಿಯ ಕುಂದಲಹಳ್ಳಿಯಲ್ಲಿ ಭಾನುವಾರ ಸಂಜೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಮೃತಳನ್ನು ಸರಿತಾ(35) ಎಂದು ಗುರುತಿಸಲಾಗಿದೆ. ತಾರಾನಾಥ್ ಕೊಲೆಗೈದ ಆರೋಪಿ. ಪತ್ನಿ ಸರಿತಾಳ ಕುತ್ತಿಗೆಗೆ ಹಗ್ಗದಿಂದ ಬಿಗಿದು ಹತ್ಯೆಗೈದಿರುವ ಪತಿ ತಾರಾನಾಥ್ ವೈಟ್ ಫೀಲ್ಡ್ ಠಾಣೆಗೆ ಬಂದು ಶರಣಾಗಿದ್ದಾನೆ.
ಮೂಲತಃ ಮಂಗಳೂರಿನವರಾದ ಈ ದಂಪತಿ ಬೆಂಗಳೂರಿನಲ್ಲಿ ನೆಲೆಸಿ, ಪಾನೀಪುರಿ ಅಂಗಡಿ ನಡೆಸುತ್ತಿದ್ದರು. ಭಾನುವಾರ ಸಂಜೆ ಪತ್ನಿಯನ್ನು ಕೊಂದು ಬಳಿಕ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದ ತಾರಾನಾಥ್ ಧೈರ್ಯ ಸಾಲದೇ ಪೊಲೀಸರಿಗೆ ಶರಣಾಗಿದ್ದಾನೆ. ಸರಿತಾ ವಿರುದ್ಧ ಈ ಹಿಂದೆ ಮಂಗಳೂರಿನ ಮೂಲ್ಕಿ ಠಾಣೆಯಲ್ಲಿ ಕಳ್ಳತನ ಪ್ರಕರಣ ದಾಖಲಾಗಿತ್ತು. “ಪರಿಚಿತರು ಪತ್ನಿಯನ್ನು ಕಳ್ಳಿ ಕಳ್ಳಿ ಎನ್ನುತ್ತಿದ್ದರು. ಸಹಿಸಲಾರದೇ ಪತ್ನಿಯನ್ನು ಹತ್ಯೆಗೈದಿರುವುದಾಗಿ ಆರೋಪಿ ಪೊಲೀಸರ ಮುಂದೆ ಹೇಳಿಕೊಂಡಿದ್ದಾನೆ. ಶರಣಾಗಿರುವ ಆರೋಪಿಯನ್ನು ಬಂಧಿಸಲಾಗಿದ್ದು, ವೈಟ್ ಫೀಲ್ಡ್ ಠಾಣಾ ಪೊಲೀಸರು ವಿಚಾರಣೆ ಮುಂದುವರೆಸಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿದ ವೈಟ್ ಫೀಲ್ಡ್ ವಿಭಾಗ ಡಿಸಿಪಿ ಎಸ್.ಗಿರೀಶ್, ಮಂಗಳೂರು ಮೂಲದ ತಾರಾನಾಥ್ ಎಂಬವರು ಇಲ್ಲಿನ ವೈಟ್ ಫೀಲ್ಡ್ ಠಾಣಾ ವ್ಯಾಪ್ತಿಯಲ್ಲಿ ಪಾನಿಪುರಿ ಅಂಗಡಿ ಇಟ್ಟುಕೊಂಡಿದ್ದರು. ಕಳೆದ 11 ವರ್ಷಗಳ ಹಿಂದೆ ತಾರಾನಾಥ್ ಅವರಿಗೆ ಮದುವೆಯಾಗಿತ್ತು. ಭಾನುವಾರ ತಾರಾನಾಥ್ ಏಕಾಏಕಿ ತನ್ನ ಹೆಂಡತಿಯ ಕುತ್ತಿಗೆ ಹಿಸುಕಿ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ. ಬಳಿಕ ಆತನೇ ವೈಟ್ಫೀಲ್ಡ್ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ.