ಬೆಳಗಾವಿ: ವಿದ್ಯುತ್ ತಂತಿ ತಗುಲಿ ರೈತ ದಂಪತಿ ಸಾವನ್ನಪ್ಪಿರುವ ಘಟನೆ ತಾಲೂಕಿನ ಬಿಜಗರಣಿ ಗ್ರಾಮದಲ್ಲಿ ಇಂದು ನಡೆದಿದೆ. ನಿಸ್ಸಾರ್ ಅಹಮ್ಮದ್ ಮಕ್ಬೂಲ್ ಸಾಬ್ ಸನದಿ(32), ಪತ್ನಿ ಲತಾ ನಿಸ್ಸಾರ್ ಅಹಮ್ಮದ್ ಸನದಿ(26) ಮೃತರು.
ಹೊಲದಲ್ಲಿ ಕೆಲಸ ಮಾಡುತ್ತಿದ್ದಾಗ ಕೆಳಗೆ ಬಿದ್ದಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ ಘಟನೆ ನಡೆದಿದೆ.
“ಜಮೀನಿನಲ್ಲಿ ಹಾದು ಹೋಗಿರುವ 11 ಕೆವಿ ವಿದ್ಯುತ್ ತಂತಿಗಳು ಹಳೆಯದಾಗಿದ್ದು, ತುಕ್ಕು ಹಿಡಿದಿದ್ದವು. ಇವುಗಳನ್ನು ಬದಲಾಯಿಸುವಂತೆ ಅನೇಕ ಬಾರಿ ಗ್ರಾಮಸ್ಥರು ಒತ್ತಾಯಿಸಿದ್ದರು. ಆದರೆ ಹೆಸ್ಕಾಂ ಅಧಿಕಾರಿಗಳು ಕ್ರಮ ಕೈಗೊಂಡಿರಲಿಲ್ಲ. ಘಟನೆಗೆ ಹೆಸ್ಕಾಂ ಅಧಿಕಾರಿಗಳೇ ಕಾರಣ” ಎಂದು ಗ್ರಾಮಸ್ಥರು ಆರೋಪಿಸಿದರು. ತನಿಖೆ ನಡೆಸಿ, ಮೃತರ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡುವಂತೆಯೂ ಅವರು ಒತ್ತಾಯಿಸಿದ್ದಾರೆ.
ವಿದ್ಯುತ್ ತಂತಿ ಸ್ಪರ್ಶಿಸಿ ದಂಪತಿ ಸಾವು: ಜಾತ್ರೆಗೆ ಆಗಮಿಸಿದ್ದಾಗ ವಿದ್ಯುತ್ ತಂತಿ ಸ್ಪರ್ಶಿಸಿ ದಂಪತಿ ಮೃತಪಟ್ಟಿದ್ದ ಘಟನೆ ಜೂ.13ರಂದು ಚಿತ್ತಾಪುರ ಪಟ್ಟಣದಲ್ಲಿ ನಡೆದಿತ್ತು. ಯಾದಗಿರಿ ಜಿಲ್ಲೆಯ ಏವೂರ ತಾಂಡಾದ ನಿವಾಸಿಗಳಾದ ಶಿವು ರಾಠೋಡ (30) ಮತ್ತು ತಾರಾಬಾಯಿ ರಾಠೋಡ (26) ಸಾವನ್ನಪ್ಪಿದ್ದರು. ಚಿತ್ತಾಪುರ ಪಟ್ಟಣದಲ್ಲಿ ನಡೆದ ಹಜರತ್ ಚಿತಾಶಹಾವಲಿ ದರ್ಗಾ ಜಾತ್ರಾ ಕಾರ್ಯಕ್ರಮಕ್ಕೆ ಇವರು ಆಗಮಿಸಿದ್ದರು. ವಿದ್ಯುತ್ ಕಂಬದ ಆಸರೆಗೆಂದು ನೆಲದಲ್ಲಿ ಹೂತಿದ್ದ ತಂತಿಗೆ ವಿದ್ಯುತ್ ಪ್ರವಹಿಸಿತ್ತು. ಅಲ್ಲೇ ನೀರು ನಿಂತಿದ್ದರಿಂದ ಅವಘಡ ಸಂಭವಿಸಿದೆ. ಮೊದಲು ಪತ್ನಿ ತಾರಾಬಾಯಿಗೆ ವಿದ್ಯುತ್ ಸ್ಪರ್ಶಿಸಿ ಕೆಳಗೆ ಬಿದ್ದಿದ್ದರು. ಪತ್ನಿಯನ್ನು ರಕ್ಷಿಸಲು ಹೋದ ಪತಿ ಶಿವು ರಾಠೋಡ್ ಕೂಡ ವಿದ್ಯುತ್ ತಗುಲಿ ಇಬ್ಬರು ಸಾವನ್ನಪ್ಪಿದ್ದರು. ಚಿತ್ತಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ವಿದ್ಯುತ್ ತಂತಿ ತಗುಲಿ ಇಬ್ಬರು ಸಾವು: ಟ್ರಯಲ್ಗೆ ತೆಗೆದುಕೊಂಡು ಹೋದ ಕಾರು ಅಪಘಾತಕ್ಕೀಡಾಗಿ, ಅಪಘಾತ ಸ್ಥಳದಲ್ಲಿ ವಿದ್ಯುತ್ ತಂತಿ ತಗುಲಿ ಇಬ್ಬರು ಮೃತಪಟ್ಟು, ಮೂವರು ಗಾಯಗೊಂಡಿದ್ದ ಘಟನೆ ಜು.27ರಂದು ಮೈಸೂರು ನಗರದ ಹೊರವಲಯದ ಮಾನಂದವಾಡಿ ರಸ್ತೆಯಲ್ಲಿ ನಡೆದಿತ್ತು. ಸೆಕೆಂಡ್ ಹ್ಯಾಂಡ್ ಇನ್ನೋವಾ ಕಾರು ಕೊಂಡುಕೊಳ್ಳಲೆಂದು, ಟ್ರಯಲ್ ನೋಡುವುದಾಗಿ ಹೇಳಿ ಅಶೋಕಪುರಂ ನಿವಾಸಿ ರವಿ ಕುಮಾರ್ ಎಂಬವರು ಕಾರು ತೆಗೆದುಕೊಂಡು ಹೋಗಿದ್ದರು. ಕಾರಿನಲ್ಲಿ ಅವರ ಜೊತೆ ಭಾಸ್ಕರ್, ರವಿ, ಸಂದೇಶ್ ಹಾಗೂ ಶಿವಕುಮಾರ್ ಎಂಬವರು ತೆರಳಿದ್ದರು. ಕಾರು ಮಾನಂದವಾಡಿ ರಸ್ತೆಯ ಬಳಿ ನಿಯಂತ್ರಣ ತಪ್ಪಿ ಕಾಂಪೌಂಡ್ಗೆ ಡಿಕ್ಕಿ ಹೊಡೆದಿತ್ತು. ಆ ನಂತರ ವಿದ್ಯುತ್ ಕಂಬಕ್ಕೂ ಕಾರು ಡಿಕ್ಕಿ ಹೊಡೆದು ವಿದ್ಯುತ್ ತಂತಿ ಕಾರಿಗೆ ತಗುಲಿದೆ. ಈ ಸಂದರ್ಭದಲ್ಲಿ ಅದೇ ರಸ್ತೆಯಲ್ಲಿ ಸಾಗುತ್ತಿದ್ದ ಆಟೋ ಡ್ರೈವರ್ ಕಿರಣ್ ಇವರ ಸಹಾಯಕ್ಕೆ ಧಾವಿಸಿ ಬಂದಿದ್ದರು. ತುಂಡಾದ ವಿದ್ಯುತ್ ತಂತಿ ತಾಗಿ ರವಿ ಕುಮಾರ್ ಹಾಗೂ ಸಹಾಯ ಮಾಡಲು ಬಂದಿದ್ದ ಕಿರಣ್ ಇಬ್ಬರೂ ಮೃತಪಟ್ಟಿದ್ದರು.