ಬೆಂಗಳೂರು: ವಾರಾಂತ್ಯದ ಪಾರ್ಟಿ ನೆಪದಲ್ಲಿ ಪುಂಡಾಟಿಕೆ ಮೆರೆಯುವ ಪ್ರಕರಣಗಳು ನಗರದಲ್ಲಿ ಆಗಾಗ ವರದಿಯಾಗುತ್ತಲೇ ಇರುತ್ತವೆ. ಅಂಥಹದ್ದೇ ಮತ್ತೊಂದು ಪ್ರಕರಣ ಶನಿವಾರ ತಡರಾತ್ರಿ ನಗರದ ಚರ್ಚ್ ಸ್ಟ್ರೀಟ್ನಲ್ಲಿ ನಡೆದಿದೆ.
ಮದ್ಯದ ಅಮಲಿನಲ್ಲಿದ್ದ ಯುವತಿಯೊಬ್ಬಳು ತೂರಾಡುತ್ತ ಸಾರ್ವಜನಿಕರಿಗೆ ತಲೆ ನೋವಾದ ಘಟನೆ ನಡೆದಿದೆ.
ಬುದ್ಧಿ ಹೇಳಲು ಹೋದವರ ಮೇಲೆಯೇ ಮುಗಿ ಬೀಳುತ್ತಿದ್ದ ಯುವತಿಯನ್ನು ಸಂಬಾಳಿಸುವಲ್ಲಿ ಪೊಲೀಸರೇ ಹೈರಾಣಾಗಿದ್ದಾರೆ. ರಾತ್ರಿ ಪಾಳಿಯಲ್ಲಿದ್ದ ಪೊಲೀಸ್ ಸಿಬ್ಬಂದಿ ಯುವತಿಯನ್ನು ಸುರಕ್ಷಿತವಾಗಿ ಮನೆಗೆ ತಲುಪಿಸಲು ಯತ್ನಿಸಿದ್ದಾರೆ. ಆದರೆ ಮಹಿಳಾ ಸಿಬ್ಬಂದಿಗಳಿಲ್ಲದ ಕಾರಣ ಯುವತಿಯನ್ನು ಆಟೋದಲ್ಲಿ ಕೂರಿಸಲು ಪೊಲೀಸರೇ ಅಂಗಲಾಚಿದ ಪ್ರಸಂಗ ಎದುರಾಗಿತ್ತು. ಸತತ ಒಂದು ಗಂಟೆ ಕಾಲ ಪ್ರಯತ್ನಿಸಿದ ಬಳಿಕ ಅಂತಿಮವಾಗಿ ಬೇರೆ ಯುವತಿಯರ ಸಹಾಯದಿಂದ ಆಕೆಯನ್ನು ಮನೆಗೆ ಸುರಕ್ಷಿತವಾಗಿ ಕಳಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಕಳೆದ ತಿಂಗಳೂ ಸಹ ಕೇಂದ್ರ ವಿಭಾಗದ ಪೊಲೀಸರ ಕಾರ್ಯಾಚರಣೆ ಸಂದರ್ಭದಲ್ಲಿ ಕೆಲ ವಿದೇಶಿ ಪ್ರಜೆಗಳು ಭಾರಿ ಹೈಡ್ರಾಮಾ ಮಾಡಿದ್ದ ಪ್ರಸಂಗ ಸಹ ನಡೆದಿತ್ತು. ವಶಕ್ಕೆ ಪಡೆಯುವ ಯತ್ನದಲ್ಲಿದ್ದ ಪೊಲೀಸರಿಂದ ತಪ್ಪಿಸಿಕೊಂಡು ಕೆಲ ವಿದೇಶಿ ಪ್ರಜೆಗಳು ದಿಕ್ಕಾಪಾಲಾಗಿ ಓಡಿದ್ದರು. ಇನ್ನೂ ಕೆಲವರು ಮದ್ಯದ ಅಮಲಿನಲ್ಲಿ ಪೊಲೀಸರೊಂದಿಗೆ ವಾಗ್ವಾದಕ್ಕಿಳಿದಿದ್ದರು.