ಬೆಳಗಾವಿ: ಗೃಹ ಲಕ್ಷ್ಮೀ ಯೋಜನೆಗೆ ನೋಂದಣಿ ಮಾಡಿಸಿಕೊಳ್ಳಲು ಸುರಿಯುವ ಮಳೆಯಲ್ಲೇ ಮಹಿಳೆಯರು ಗಂಟೆಗಟ್ಟಲೇ ನಿಂತಿರುವುದು ನಗರದ ರಿಸಾಲ್ದಾರ್ ಗಲ್ಲಿಯ ಬೆಳಗಾವಿ ಒನ್ ಕೇಂದ್ರದಲ್ಲಿ ಕಂಡು ಬಂತು.
ಗೃಹ ಲಕ್ಷ್ಮಿ ಯೋಜನೆ ನೋಂದಣಿಗೆ ಚಾಲನೆ ಸಿಕ್ಕ ದಿನದಿಂದಲೂ ಇಲ್ಲಿನ ಬೆಳಗಾವಿ ಒನ್ ಕೇಂದ್ರದಲ್ಲಿ ಮಹಿಳೆಯರ ದಟ್ಟಣೆ ನಿತ್ಯವೂ ಇದ್ದು, ಮಂಗಳವಾರ ಸಹ ಸುರಿವ ಮಳೆ ಲೆಕ್ಕಿಸದೇ ಛತ್ರಿ ಹಿಡಿದುಕೊಂಡು ಸಾಲಿನಲ್ಲಿ ನಿಂತ ಮಹಿಳೆಯರು ತಮ್ಮ ಸರದಿ ಯಾವಾಗ ಬರುತ್ತೊ ಎಂದು ಕಾಯುತ್ತಾ ನಿಂತಿದ್ದರು.
ಸರ್ವರ್ ಸಮಸ್ಯೆಯಿಂದಾಗಿ ಬೆಳಗ್ಗೆ 9 ಗಂಟೆಗೆ ಬಂದಿದ್ದ ಮಹಿಳೆಯರು ತಮ್ಮ ಗೃಹ ಲಕ್ಷ್ಮಿ ಯೋಜನೆ ಅರ್ಜಿ ಹಾಕಲು ಮಧ್ಯಾಹ್ನದ ವರೆಗೂ ಕಾಯಬೇಕಾಯಿತು. ಒಬ್ಬೊಬ್ಬರು ಕಮ್ಮಿ ಎಂದರೂ ಸುಮಾರು ನಾಲ್ಕು ಗಂಟೆಗೂ ಹೆಚ್ಚು ಕಾಲ ಕಾಯುವ ಸ್ಥಿತಿ ನಿರ್ಮಾಣವಾಗಿತ್ತು. ಚಿಕ್ಕ ಮಕ್ಕಳನ್ನು ಕರೆದುಕೊಂಡು ಬಂದಿದ್ದ ಮಹಿಳೆಯರು, ವೃದ್ಧರು ಮಳೆಯಲ್ಲಿ ನೆನೆದುಕೊಂಡೇ ನಿಂತಿದ್ದರು. ಸರ್ಕಾರ ಕೊಡುವ ಎರಡು ಸಾವಿರ ರೂಪಾಯಿಗಾಗಿ ನಾವು ಇಷ್ಟೆಲ್ಲ ಕಷ್ಟ ಪಡಬೇಕು ಎಂದು ಕೆಲ ಮಹಿಳೆಯರು ಗೊಣಗುತ್ತಿರುವ ದೃಶ್ಯವೂ ಕಂಡು ಬಂತು.