ನಾಗಪುರ (ಮಹಾರಾಷ್ಟ್ರ) : ಇತ್ತೀಚಿನ ದಿನಗಳಲ್ಲಿ ಆನ್ಲೈನ್ ಗೇಮ್‌ಗಳನ್ನು ಆಡಿ ಹಣ ಕಳೆದುಕೊಳ್ಳುವವರ ಸಂಖ್ಯೆ ಹೆಚ್ಚುತ್ತಿದೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಆರೋಪಿಗಳು ಅಮಾಯಕರಿಗೆ ಮೋಸ ಮಾಡಿ ಹಣ ಗಳಿಸುತ್ತಿದ್ದಾರೆ.
ಹೆಚ್ಚು ಹಣ ಮಾಡುವ ಆಸೆಗೆ ಬಿದ್ದು, ಇದ್ದ ಹಣವನ್ನು ಕಳೆದುಕೊಂಡು ಜನರು ಬೀದಿಗೆ ಬೀಳುತ್ತಿದ್ದಾರೆ. ಇಂಥದ್ದೇ ಒಂದು ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ಖ್ಯಾತ ಉದ್ಯಮಿಯೊಬ್ಬರು ಆನ್ಲೈನ್ ಗೇಮಿನ ಗೀಳಿಗೆ ಬಿದ್ದು 58 ಕೋಟಿ ರೂಪಾಯಿ ಕಳೆದುಕೊಂಡಿದ್ದಾರೆ. ಬಳಿಕ ಆತ್ಮಹತ್ಯೆಗೆ ಯತ್ನಿಸಿದ ಪ್ರಕರಣ ಬೆಳಕಿಗೆ ಬಂದಿದೆ.
ನಾಗಪುರ ಜಿಲ್ಲೆಯ ಉದ್ಯಮಿಯೊಬ್ಬರು ಆನ್ಲೈನ್ ಗೇಮಿಂಗ್ ಮೂಲಕ ಹೆಚ್ಚು ಹಣ ಸಂಪಾದಿಸುವ ವಂಚನೆಯ ಜಾಲದಲ್ಲಿ ಸಿಲುಕಿ ಕೋಟಿಗಟ್ಟಲೆ ಹಣ ಕಳೆದುಕೊಂಡಿದ್ದಾರೆ. ಈ ಸಂಬಂಧ ಉದ್ಯಮಿ ಆರೋಪಿ ವಿರುದ್ಧ ದೂರು ದಾಖಲಿಸಿದ್ದಾರೆ. ಉದ್ಯಮಿ ಗುರುತನ್ನು ಪೊಲೀಸರು ಬಹಿರಂಗಪಡಿಸಿಲ್ಲ.
ಸಂತ್ರಸ್ತ ಉದ್ಯಮಿಯು ಹೆಚ್ಚು ಹಣ ಗಳಿಸುವ ಉದ್ದೇಶದಿಂದ ಆನ್ಲೈನ್ ಗೇಮ್ನ ಚಟಕ್ಕೆ ಬಿದ್ದಿದ್ದರು. ಆನ್ಲೈನ್ನಲ್ಲಿ ಆಟ ಆಡುವ ಮೂಲಕ ಉದ್ಯಮಿಯು ನವೆಂಬರ್ 2021ರಿಂದ 2023ರವರೆಗೆ 58 ಕೋಟಿ ರೂಪಾಯಿ ಕಳೆದುಕೊಂಡಿದ್ದಾರೆ. ಈ ಸಂಬಂಧ ಆರೋಪಿ ಅನಂತ್ ನವರಥನ್ ಜೈನ್ ಎಂಬವರ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ಗೊಂಡಿಯಾ ಜಿಲ್ಲೆಯಲ್ಲಿರುವ ಆರೋಪಿ ಅನಂತ್ ಮನೆ ಮೇಲೆ ದಾಳಿ ನಡೆಸಿದ್ದಾರೆ. 4 ಕೆಜಿ ಚಿನ್ನಾಭರಣ ಮತ್ತು 17 ಕೋಟಿ ನಗದು ವಶಕ್ಕೆ ಪಡೆದಿದ್ದಾರೆ. ಆರೋಪಿ ಅನಂತ್ ಪರಾರಿಯಾಗಿದ್ದು, ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ.