ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ರಾಜ್ಯದಲ್ಲಿನ ಎಲ್ಲ ಹಾಲು ಒಕ್ಕೂಟಗಳು ಹಾಗೂ ಕೆಎಂಎಫ್ ಅಧ್ಯಕ್ಷರ ಸಭೆ ನಡೆಸಿದರು.
ಪ್ರತಿ ಲೀಟರ್ ಹಾಲಿಗೆ ಕನಿಷ್ಠ ಮೂರು ರೂ. ಹೆಚ್ಚಳ ಮಾಡಲು ತೀರ್ಮಾನಿಸಲಾಗಿದೆ. ಆಗಸ್ಟ್ ಒಂದರಿಂದ ಜಾರಿಯಾಗುವಂತೆ ಹಾಲಿನ ದರ ಹೆಚ್ಚಳ ಮಾಡಲು ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಹಾಲು ಒಕ್ಕೂಟಗಳು ಹಾಗೂ ಕೆಎಂಎಫ್ ಅಧ್ಯಕ್ಷರ ಜೊತೆ ಸಿಎಂ ಸಭೆಕಳೆದ ತಿಂಗಳು ಕೆಎಂಎಫ್ ಅಧ್ಯಕ್ಷರಾಗಿ ಶಾಸಕ ಭೀಮಾ ನಾಯಕ್ ಆಯ್ಕೆಯಾಗಿದ್ದು, ಅಂದೇ ಪ್ರತಿ ಲೀಟರ್ ಹಾಲಿಗೆ ಕನಿಷ್ಠ ಐದು ರೂಪಾಯಿ ಹೆಚ್ಚಳ ಮಾಡುವ ಘೋಷಣೆ ಮಾಡಿದ್ದರು. ಹಾಲಿನ ದರ ಹೆಚ್ಚಳ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಜೊತೆ ಚರ್ಚಿಸುವುದಾಗಿಯೂ ತಿಳಿಸಿದ್ದರು. ವಿಧಾನಸಭೆ ಬಜೆಟ್ ಅಧಿವೇಶನ ಹಿನ್ನೆಲೆ 15 ದಿನ ಮುಂದಕ್ಕೆ ಹೋದ ಸಭೆ ಶುಕ್ರವಾರ ನಡೆದಿದೆ. ಹಾಲನ್ನು ಕೊಳ್ಳುವ ಗ್ರಾಹಕರನ್ನು ಸಹ ಪ್ರಮುಖವಾಗಿ ಗಮನದಲ್ಲಿಟ್ಟುಕೊಂಡು ಮುಖ್ಯಮಂತ್ರಿ ಸಿದ್ದರಾಮಯ್ಯ 3 ರೂ. ಹೆಚ್ಚಳಕ್ಕೆ ಸಮ್ಮತಿ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಆಗಸ್ಟ್ ಒಂದರಿಂದ ಹಾಲಿನ ದರ ಹೆಚ್ಚಳವಾಗಲಿದ್ದು, 5ರ ಬದಲು 3 ರೂ.ಗೆ ಒಪ್ಪಿಗೆ ಸಿಕ್ಕಿದೆ ಎಂದು ತಿಳಿದುಬಂದಿದೆ.
ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಹಾಲು ಖರೀದಿಸುವ ರೈತರಿಗೆ ನೀಡುತ್ತಿರುವ ಸಹಾಯಧನವನ್ನು 5 ರೂಪಾಯಿಯಿಂದ 7 ರೂಪಾಯಿಗೆ ಹೆಚ್ಚಿಸುವ ಭರವಸೆ ನೀಡಲಾಗಿತ್ತು. ಈ ಹೆಚ್ಚಳ ಮಾಡುವುದಕ್ಕೆ ಹಾಲಿನ ಮಾರಾಟದ ಬೆಲೆ ಏರಿಕೆ ಅನಿವಾರ್ಯ ಎಂದು ಕೆಎಂಎಫ್ ಅಭಿಪ್ರಾಯಪಟ್ಟಿತ್ತು. ಇದೇ ರೀತಿ ಕೆಎಂಎಫ್ಗೆ ನಷ್ಟವಾಗದ ರೀತಿ ಹಾಗೂ ರೈತರಿಗೂ ಹೆಚ್ಚುವರಿ ಸಹಾಯಧನ ಸಿಗುವಂತೆ ಮಾಡಲು ಹಾಲಿನ ದರ ಏರಿಕೆ ಮಾತ್ರ ಮಾರ್ಗವಾಗಿತ್ತು.