ವಿಜಯನಗರ: ಜಿ20 ಸಭೆಗೆ ಆಗಮಿಸಿರುವ ಶೆರ್ಪಾಗಳಿಗೆ ವಿಶ್ವವಿಖ್ಯಾತ ಹಂಪಿಯ ಪುರಂದರದಾಸರ ಮಂಟಪದಲ್ಲಿ ಇಂದು ಬೆಳಗ್ಗೆ ಯೋಗಾಭ್ಯಾಸ ಮಾಡಿಸಲಾಯಿತು.
ಜಿ20 ಸಭೆಯಲ್ಲಿ ಭಾಗಿಯಾದ ಶೆರ್ಪಾಗಳು ಇಂದು ಬೆಳಗ್ಗೆ ವಿಶ್ವಪಾರಂಪರಿಕ ತಾಣ ಹಂಪಿಗೆ ಭೇಟಿ ನೀಡಿದ್ದರು. ಸೂರ್ಯೋದಯಕ್ಕೂ ಮುನ್ನ ತುಂಗಭದ್ರಾ ನದಿ ದಡದಲ್ಲಿರುವ ಪುರಂದರ ಮಂಟಪದಲ್ಲಿ ಯೋಗಾಭ್ಯಾಸ ಮಾಡಿದರು.
ವಿಶ್ವ ಪಾರಂಪರಿಕ ತಾಣ ಹಂಪಿಯಲ್ಲಿ ಜಿ-20 ಸಾಂಸ್ಕೃತಿಕ ಕಾರ್ಯಕಾರಿ ಗುಂಪಿನ ಸಭೆಗೆ ಆಗಮಿಸಿದ ಸದಸ್ಯ ಹಾಗೂ ಅತಿಥಿ ರಾಷ್ಟ್ರಗಳ ಅತ್ಯುನ್ನತ ಪ್ರತಿನಿಧಿಗಳು ಯೋಗಾಭ್ಯಾಸ ನಂತರ ಐತಿಹಾಸಿಕ ತುಂಗಭದ್ರಾ ನದಿಯಲ್ಲಿ ಹರಿಗೋಲು ಸವಾರಿ (ಕೊರಾಕಲ್ ರೈಡ್) ಮಾಡಿದರು. ಹಂಪಿಯ ಚಕ್ರತೀರ್ಥದ ತುಂಗಭದ್ರಾ ನದಿಯಲ್ಲಿ ಹರಿಗೋಲು ಸವಾರಿ ಕೈಗೊಂಡು ಹಂಪಿಯ ಕಲ್ಲುಬಂಡೆ, ನದಿಯ ಪ್ರಾಕೃತಿಕ ಸೌಂದರ್ಯವನ್ನು ಸವಿದರು.
ಹಂಪಿಯಲ್ಲಿ ಶೆರ್ಪಾಗಳಿಂದ ಯೋಗಾಭ್ಯಾಸಹಂಪಿಯ ಸ್ಮಾರಕಗಳ ವೀಕ್ಷಣೆ: ಶೆರ್ಪಾ ಸಭೆಯ ನಂತರ ಶುಕ್ರವಾರ(ಜು.14) ಸಂಜೆ ಜಿ-20 ಪ್ರತಿನಿಧಿಗಳು ವಿಶ್ವವಿಖ್ಯಾತ ಹಂಪಿಯ ಸ್ಮಾರಕಗಳನ್ನು ವೀಕ್ಷಣೆ ಮಾಡಿದ್ದರು. ಪ್ರವಾಸೋದ್ಯಮ ಇಲಾಖೆ, ಕೇಂದ್ರ ಮತ್ತು ರಾಜ್ಯ ಪುರಾತತ್ವ ಇಲಾಖೆಯಿಂದ ಸ್ಮಾರಕ ವೀಕ್ಷಣೆ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು. ಹಂಪಿಯ ಮಹಾನವಮಿ ದಿಬ್ಬ, ಹಜಾರರಾಮ, ಕಮಲ ಮಹಲ್ ಹಾಗೂ ಗಜಶಾಲೆ, ರಾಣಿ ಅರಮನೆ ಅಧಿಷ್ಠಾನ ಹಾಗೂ ವಿವಿಧ ಸ್ಮಾರಕಗಳ ಕುರಿತು ಪ್ರವಾಸಿ ಮಾರ್ಗದರ್ಶಿಗಳು ಗೌರವಪೂರಕವಾಗಿ ಸ್ವಾಗತಿಸುತ್ತ ಮಾಹಿತಿ ನೀಡಿದ್ದರು.