ಬೆಳಗಾವಿ: ಇಸ್ರೋದಿಂದ ಚಂದ್ರಯಾನ-3 ಉಡಾವಣೆಗೆ ಕ್ಷಣಗಣನೆ ಶುರುವಾಗಿದೆ.
ಈ ಮಹತ್ಕಾರ್ಯದಲ್ಲಿ ಬೆಳಗಾವಿ ಜಿಲ್ಲೆ ಯುವಕನೊಬ್ಬ ಸೇವೆ ಸಲ್ಲಿಸುವ ಮೂಲಕ ಜಿಲ್ಲೆಯ ಕೀರ್ತಿ ಹೆಚ್ಚಿಸಿದ್ದಾರೆ. ಖಾನಾಪುರ ತಾಲೂಕಿನ ಅನಗಡಿ ಗ್ರಾಮದ ‘ಪ್ರಕಾಶ ಪೆಡ್ನೇಕರ್’ ಎಂಬ ಯುವ ವಿಜ್ಞಾನಿ ಚಂದ್ರಯಾನ- 3 ಮಿಷನ್ನಲ್ಲಿ ಕೆಲಸ ಮಾಡುತ್ತಿರುವವರು. ಚಂದ್ರಯಾನ-2 ರಲ್ಲಿಯೂ ಇವರು ಕೆಲಸ ಮಾಡಿದ್ದರು.
ಶುಭ ಹಾರೈಸಿದ ಸ್ವಾಮೀಜಿ: ಇಡೀ ದೇಶವೇ ಕುತೂಹಲದಿಂದ ಕಾಯುತ್ತಿರುವ ಚಂದ್ರಯಾನ – 3 ಉಡಾವಣೆ ಬಗ್ಗೆ ಮಾತನಾಡಿರುವ ಬೆಳಗಾವಿಯ ನಾಗನೂರು ರುದ್ರಾಕ್ಷಿ ಮಠದ ಡಾ. ಅಲ್ಲಮಪ್ರಭು ಸ್ವಾಮೀಜಿ “21ನೇ ಶತಮಾನ ಭಾರತದ ಪಾಲಿಗೆ ವಿಶೇಷವಾದ ಶತಮಾನ. ವಿಶ್ವದಲ್ಲೇ ಭಾರತ ವಿಶೇಷ ಸ್ಥಾನ ಹೊಂದಿದೆ. ವಿಶ್ವ ಗುರುವಾಗುವತ್ತ ಹೆಜ್ಜೆ ಇಡುವ ಈ ಸಂದರ್ಭದಲ್ಲಿ ನಮ್ಮ ದೇಶದ ಪ್ರತಿಷ್ಠಿತ ಇಸ್ರೋದಿಂದ ಕೈಗೊಂಡಿರುವ ಚಂದ್ರಯಾನ – 3 ಉಡಾವಣೆ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.
ಬೆಳಗಾವಿಯ ಡಾ.ಸ. ಜ ನಾಗಲೋಟಿ ಮಠ ವಿಜ್ಞಾನ ಕೇಂದ್ರದ ಯೋಜನಾಧಿಕಾರಿ ಡಾ. ರಾಜಶೇಖರ ಪಾಟೀಲ್ ಮಾತನಾಡಿ “ಇಡೀ ವಿಶ್ವದಲ್ಲೇ ಭಾರತದ ಕೀರ್ತಿಯನ್ನು ಅಜರಾಮರಗೊಳಿಸಿದ ಶ್ರೇಯಸ್ಸು ಭಾರತದ ಹೆಮ್ಮೆಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋಗೆ ಸಲ್ಲುತ್ತದೆ. ಪ್ರಸ್ತುತ ಇಸ್ರೋ ಕೋಟ್ಯಂತರ ಭಾರತೀಯರ ಕನಸು ನನಸುಗೊಳಿಸಲು ಹೊರಟಿದೆ. ಚಂದ್ರಯಾನ-3 ಅನ್ನು ಎಲ್.ವಿ.ಎಂ-3 ರಾಕೆಟ್ ಮೂಲಕ ಉಡಾವಣೆ ಮಾಡಲು ಸಕಲ ಸಿದ್ಧತೆ ನಡೆದಿದೆ. ಇದು ಅತ್ಯಂತ ಯಶಸ್ವಿಯಾಗಲಿ. ಆ ಮೂಲಕ ಭಾರತೀಯರಿಗೆ ಚಂದ್ರನ ಬಗ್ಗೆ ಅಪಾರ ಜ್ಞಾನ ಮತ್ತು ಮಾಹಿತಿ ದೊರೆಯಲಿ ಎಂದು ಶುಭ ಹಾರೈಸಿದರುಬಹುನಿರೀಕ್ಷೆಯ ಚಂದ್ರಯಾನ 3 ಉಡಾವಣೆಗೆ ಕ್ಷಣಗಣನೆ: ಇಡೀ ದೇಶವೇ ಕಾತರದಿಂದ ಕಾಯುತ್ತಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಚಂದ್ರಯಾನ 3 ಮಿಷನ್ ಉಡಾವಣೆಗೆ ಕ್ಷಣಗಣನೆ ಶುರುವಾಗಿದೆ. ಭಾರತದ 3ನೇ ಅತಿ ದೊಡ್ಡ ಬಾಹ್ಯಾಕಾಶ ಯೋಜನೆಯಾದ ಚಂದ್ರಯಾನ 3 ಇಂದು ಮಧ್ಯಾಹ್ನ 2.35ಕ್ಕೆ ಆರಂಭಗೊಳ್ಳಲಿದೆ. 3 ಹಂತದ ವಿಶೇಷ ಸಾಮರ್ಥ್ಯ ಹೊಂದಿರುವ ಬಾಹ್ಯಾಕಾಶ ನೌಕೆ ಚಂದ್ರನ ದಕ್ಷಿಣ ಭಾಗದ ಮೇಲ್ಮೈನಲ್ಲಿ ಸುಸೂತ್ರವಾಗಿ ಲ್ಯಾಂಡ್ ಆಗಲಿದೆ. ಚಂದ್ರಯಾನ 2ರಲ್ಲಿ ಆದ ಲೋಪಗಳನ್ನು ಸರಿಪಡಿಸಿಕೊಂಡು ಚಂದ್ರನ ಅಂಗಳದ ನಿಗದಿತ ಸ್ಥಳದಲ್ಲಿ ರೋವರ್ ಇಳಿಯುವಂತೆ ಮಾಡುವ ಸವಾಲು ಇಸ್ರೊ ವಿಜ್ಞಾನಿಗಳ ಮುಂದಿದೆ.