ನವದೆಹಲಿ: ಕೋಟ್ಯಾಂತರ ಕಂಗಳು ಎದುರು ನೋಡುತ್ತಿರುವ ಚಂದ್ರಯಾನ 3 ಉಡಾವಣೆಗೆ ಇನ್ನೇನು ಕೆಲವೇ ಕ್ಷಣಗಳಿರುವಾಗ ಪ್ರಧಾನಿ ಮೋದಿ ಅವರು ಯೋಜನೆಯ ಹಿಂದಿರುವ ಎಲ್ಲಾ ಭಾರತದ ವಿಜ್ಞಾನಿಗಳನ್ನು ಶ್ಲಾಘಿಸಿದ್ದಾರೆ.
ಎರಡು ದಿನಗಳ ಫ್ರಾನ್ಸ್ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿ, ”ಈ ಚಂದ್ರಯಾನ 3 ನಮ್ಮ ರಾಷ್ಟ್ರದ ಭರವಸೆ ಮತ್ತು ಕನಸುಗಳನ್ನು ಹೊತ್ತೊಯ್ಯಲಿದೆ” ಎಂದು ಬಣ್ಣಿಸಿದ್ದಾರೆ.
‘ಭಾರತದ ಬಾಹ್ಯಾಕಾಶ ಕ್ಷೇತ್ರಕ್ಕೆ ಸಂಬಂಧಿಸಿದಂತೆ 2023 ಜುಲೈ 14 ಯಾವಾಗಲೂ ಸುವರ್ಣಾಕ್ಷರಗಳಲ್ಲಿ ಕೆತ್ತಲ್ಪಡುತ್ತದೆ. ನಮ್ಮ ಚಂದ್ರಯಾನ-3 ತನ್ನ ಪ್ರಯಾಣವನ್ನು ಪ್ರಾರಂಭಿಲಿದೆ. ಕಕ್ಷೆ ಏರಿಸುವ ತಾಂತ್ರಿಕ ಕೆಲಸಗಳ ನಂತರ ಚಂದ್ರಯಾನ-3 ಅನ್ನು ಚಂದ್ರನ ವರ್ಗಾವಣೆ ಪಥಕ್ಕೆ ಸೇರಿಸಲಾಗುವುದು’ ಎಂದು ಹೇಳಿದ್ದಾರೆ.
‘ಇಂದು ಮಧ್ಯಾಹ್ನ 2.35ಕ್ಕೆ ಉಡಾವಣೆಯಾಗಲಿರುವ ಚಂದ್ರಯಾನ 3 300,000 ಕಿ.ಮೀ.ಗೂ ಹೆಚ್ಚು ದೂರವನ್ನು ಬಾಹ್ಯಾಕಾಶದಲ್ಲಿ ಕ್ರಮಿಸಲಿರುವ ಕಾರಣ ಕೆಲವು ವಾರಗಳ ನಂತ ಚಂದ್ರನನ್ನು ತಲುಪಲಿದೆ. ಆನ್‌ಬೋರ್ಡ್‌ನಲ್ಲಿರುವ ವೈಜ್ಞಾನಿಕ ಉಪಕರಣಗಳು ಚಂದ್ರನ ಮೇಲ್ಮೈಯನ್ನು ಅಧ್ಯಯನ ಮಾಡಲಿವೆ. ಈ ಅಧ್ಯಯನ ನಮ್ಮ ಚಂದ್ರನ ಬಗೆಗಿನ ಜ್ಞಾನವನ್ನು ಹೆಚ್ಚಿಸಲಿದೆ’ ಎಂದು ಅವರು ಹೇಳಿದರು.
‘ಭಾರತದ ದೇಶದ ಕನಸನ್ನು, ತಮ್ಮ ಕನಸಂತೆ ಭಾವಿಸಿ, ಚಂದ್ರಯಾನ 3 ರ ಉಡಾವಣೆಗೆ ಕೆಲಸ ಮಾಡಿರುವ ನಮ್ಮ ವಿಜ್ಞಾನಿಗಳಿಗೆ ಧನ್ಯವಾದಗಳು. ಭಾರತವು ಬಾಹ್ಯಾಕಾಶ ಕ್ಷೇತ್ರದಲ್ಲಿ ಅತ್ಯಂತ ಶ್ರೀಮಂತ ಇತಿಹಾಸವನ್ನು ಹೊಂದಿದೆ. ಚಂದ್ರಯಾನ-1 ಅನ್ನು ಜಾಗತಿಕ ಚಂದ್ರನ ಕಾರ್ಯಾಚರಣೆಗಳಲ್ಲಿ ಪಾಥ್ ಬ್ರೇಕರ್ ಎಂದು ಪರಿಗಣಿಸಲಾಗಿದೆ. ಏಕೆಂದರೆ ಚಂದ್ರಯಾನ 1 ಚಂದ್ರನ ಮೇಲೆ ನೀರಿನ ಅಣುಗಳ ಉಪಸ್ಥಿತಿಯನ್ನು ದೃಢಪಡಿಸಿತ್ತು. ಈ ಮಾಹಿತಿ ಪ್ರಪಂಚದಾದ್ಯಂತ 200 ಕ್ಕೂ ಹೆಚ್ಚು ವೈಜ್ಞಾನಿಕ ನಿಯತಕಾಲಿಕೆಗಳಲ್ಲಿ ಪ್ರಕಟಗೊಂಡಿತ್ತು’ ಎಂದು ಮೋದಿ ಹೇಳಿದರು.