ನವದೆಹಲಿ: ದೇಶದಲ್ಲಿ ಟೊಮೆಟೊ ಬೆಲೆ ಗಗನಕ್ಕೇರಿರುವ ಹಿನ್ನೆಲೆಯಲ್ಲಿ ಪ್ರಮುಖ ಗ್ರಾಹಕ ಕೇಂದ್ರಗಳಲ್ಲಿ ಟೊಮೆಟೊ ಕಡಿಮೆ ಬೆಲೆಗೆ ಲಭ್ಯವಾಗುವಂತೆ ಮಾಡಲು, ಆಂಧ್ರಪ್ರದೇಶ, ಕರ್ನಾಟಕ ಮತ್ತು ಮಹಾರಾಷ್ಟ್ರದಿಂದ ಟೊಮೆಟೊ ಖರೀದಿಸುವಂತೆ ಕೇಂದ್ರ ಸರ್ಕಾರ ಭಾರತೀಯ ರಾಷ್ಟ್ರೀಯ ಕೃಷಿ ಸಹಕಾರಿ ಮಾರುಕಟ್ಟೆ ಒಕ್ಕೂಟ (ನಾಫೆಡ್) ಮತ್ತು ಭಾರತೀಯ ರಾಷ್ಟ್ರೀಯ ಸಹಕಾರಿ ಗ್ರಾಹಕರ ಒಕ್ಕೂಟ (ಎನ್‌ಸಿಸಿಎಫ್)ಗೆ ಬುಧವಾರ ನಿರ್ದೇಶನ ನೀಡಿದೆ.
‘ಕ್ವೀನ್ ಆಫ್ ಕಿಚನ್’ ಎಂದು ಕರೆಯಲ್ಪಡುವ ಟೊಮೆಟೊದ ಚಿಲ್ಲರೆ ಬೆಲೆಯೂ ಭಾರೀ ಮಳೆಯಿಂದಾಗಿ ಉಂಟಾದ ಪೂರೈಕೆ ವ್ಯತ್ಯಯದಿಂದಾಗಿ ದೇಶದ ಹಲವು ಕಡೆಗಳಲ್ಲಿ ಪ್ರತಿ ಕೆಜಿಗೆ 200 ರೂ. ಗಡಿ ದಾಟಿದೆ. ಇನ್ನು ಕೇಂದ್ರ ಸರ್ಕಾರದ ಈ ನಿರ್ಧಾರದಿಂದ ಗ್ರಾಹಕರಿಗೆ ಅನುಕೂಲವಾಗಲಿದೆ. ಬರುವ ಶುಕ್ರವಾರದಿಂದ ರಾಷ್ಟ್ರೀಯ ರಾಜಧಾನಿ ದೆಹಲಿಯ ಎನ್ಸಿಆರ್ ಪ್ರದೇಶದ ಗ್ರಾಹಕರಿಗೆ ಚಿಲ್ಲರೆ ಮಳಿಗೆಗಳ ಮೂಲಕ ರಿಯಾಯಿತಿ ದರದಲ್ಲಿ ಟೊಮೆಟೊವನ್ನು ವಿತರಿಸಲಾಗುವುದು ಎಂದು ಗ್ರಾಹಕ ವ್ಯವಹಾರಗಳ ಸಚಿವಾಲಯ ತಿಳಿಸಿದೆ.
ಹೀಗಾಗಿ ನ್ಯಾಫೆಡ್ ಮತ್ತು ಎನ್‌ಸಿಸಿಎಫ್ ಟೊಮ್ಯಾಟೊ ಖರೀದಿಯನ್ನು ಕೈಗೊಳ್ಳಲಿವೆ. ಟೊಮೆಟೊ ಬೆಲೆ ಹೆಚ್ಚಿರುವ ಕೇಂದ್ರಗಳನ್ನು ಗುರುತಿಸಿ ಅಲ್ಲಿ ಟೊಮೆಟೊವನ್ನು ವಿತರಿಸಲಾಗುತ್ತದೆ. ಪ್ರಸ್ತುತ, ಗುಜರಾತ್, ಮಧ್ಯಪ್ರದೇಶ ಮತ್ತು ಇತರ ಕೆಲವು ರಾಜ್ಯಗಳ ಮಾರುಕಟ್ಟೆಗಳಿಗೆ ಟೊಮೆಟೊ ಹೆಚ್ಚಾಗಿ ಮಹಾರಾಷ್ಟ್ರದ ಸತಾರಾ, ನಾರಾಯಣಗಾಂವ್ ಮತ್ತು ನಾಸಿಕ್‌ನಿಂದ ಸರಬರಾಜು ಮಾಡಲಾಗುತ್ತಿದೆ. ಇದು ಜುಲೈ ಅಂತ್ಯದವರೆಗೆ ಮುಂದುವರೆಯಲಿದೆ ಎಂದು ನಿರೀಕ್ಷಿಸಲಾಗಿದೆ ಎಂದು ತಿಳಿಸಿದೆ.