ಹುಬ್ಬಳ್ಳಿ: “ಜೈನ ಮುನಿ ಹತ್ಯೆಯನ್ನು ಎಲ್ಲ ರಾಜಕೀಯ ಪಕ್ಷದವರು ಖಂಡಿಸಿದ್ದಾರೆ. ಇದಕ್ಕೆ ಧನ್ಯವಾದ. ಇಂತಹ ಕೃತ್ಯ ಆಗಲೇಬಾರದು. ಗೃಹ ಸಚಿವ ಡಾ.ಜಿ. ಪರಮೇಶ್ವರ್ ಅವರ ಭೇಟಿ ಬಳಿಕ ನಾನು ಉಪವಾಸ ಸತ್ಯಾಗ್ರಹ ಹಿಂಪಡೆಯುತ್ತೇನೆ” ಎಂದು ಗುಣಧರನಂದಿ ಮುನಿ ಮಹಾರಾಜರು ಹೇಳಿದರು. ಇದೇ ವೇಳೆ ಹಂತಕರಿಗೆ ಕಠಿಣ ಶಿಕ್ಷೆ ಬೇಡ, ಅವರ ಮನ ಪರಿವರ್ತನೆಯಾಗಲಿ ಎಂದರು.
ವರೂರಿಗೆ ಇಂದು ಗೃಹ ಸಚಿವ ಜಿ.ಪರಮೇಶ್ವರ್ ಭೇಟಿ ನೀಡಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜೈನ ಮುನಿಗಳು, “ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್, ಜಿ. ಪರಮೇಶ್ವರ್ ನಮ್ಮ ಜೊತೆ ಮಾತನಾಡಿದ್ದಾರೆ. ಹೀಗಾಗಿ ನಾನು ಉಪವಾಸ ಸತ್ಯಾಗ್ರಹ ಹಿಂಪಡೆಯತ್ತೇನೆ. ಈ ಹೋರಾಟ ರಾಜಕೀಯ ಹೋರಾಟ ಆಗಲಾರದು. ಮಠಕ್ಕೆ ಎಲ್ಲ ಪಕ್ಷದವರ (ಬಿಜೆಪಿ, ಕಾಂಗ್ರೆಸ್) ಸಹಕಾರವಿದೆ. ಇಲ್ಲಿರುವ ರಸ್ತೆಗೆ ಸಿದ್ದರಾಮಯ್ಯ ಅನುದಾನ ಕೊಟ್ಟಿದ್ದಾರೆ.
ಎಲ್ಲ ಪಕ್ಷದವರೂ ನನಗೆ ಸಹಕಾರ ಕೊಟ್ಟಿದ್ದಾರೆ. ಜೈನ ಮುನಿಯನ್ನು ಹತ್ಯೆ ಮಾಡಿದವರಿಗೆ ಕಠಿಣ ಶಿಕ್ಷೆಯಾಗಬಾರದು. ನಾವು ಅಹಿಂಸಾವಾದಿಗಳು. ಕೊಲೆ ಮಾಡಿದವರ ಮನ ಪರಿವರ್ತನೆ ಆಗಲಿ. ನಾನು ಕ್ಷಮಾದಾನ ನೀಡುತ್ತೇನೆ” ಎಂದರು.”ನಮ್ಮ ಬೇಡಿಕೆಗೆ ಸಚಿವ ಜಿ. ಪರಮೇಶ್ವರ್ ಒಪ್ಪಿಕೊಂಡಿದ್ದಾರೆ. ಗೃಹ ಸಚಿವರ ಮೇಲೆ ನಮಗೆ ಶೇ 100 ರಷ್ಟು ಗ್ಯಾರಂಟಿ ಇದೆ.
ಅವರು ನಮಗೆ ಬರವಣಿಗೆಯ ಮೂಲಕ ನಮ್ಮ ಬೇಡಿಕೆಗೆ ಸ್ಪಂದಿಸುತ್ತಾರೆ ಎಂಬ ನಂಬಿಕೆ ಇದೆ. ಕ್ಯಾಬಿನೆಟ್ ಇದ್ದರೂ ಇಲ್ಲಿಗೆ ಬಂದಿದ್ದಾರೆ. ಅವರಿಗೆ ಧನ್ಯವಾದ ಹೇಳುತ್ತೇನೆ. ಕರ್ನಾಟಕದಲ್ಲಿ ಶಾಂತಿ ನೆಲೆಸಲಿ.
ಪಂಚ ಪೀಠಾಧಿಪತಿಗಳು ನಮ್ಮ ಜತೆ ನಿಂತರು. ಕೆಲವು ಮುಸ್ಲಿಂ ಸಮುದಾಯದ ಜನರೂ ಕೂಡ ಬೆಂಬಲ ವ್ಯಕ್ತಪಡಿಸಿದ್ದಾರೆ” ಎಂದು ಹೇಳುತ್ತಾ ಮುನಿಗಳು ಸುದ್ದಿಗೋಷ್ಠಿಯಲ್ಲಿ ಭಾವುಕರಾದರು.