ಬೆಳಗಾವಿ: ಕೃಷ್ಣಾ ಮೇಲ್ದಂಡೆ ಯೋಜನೆಯಡಿ ಮುಳುಗಡೆ ಸಂತ್ರಸ್ತರಿಗೆ 5 ಸಾವಿರ ಕೋಟಿ ರೂ ಅಲ್ಲ, 5 ಪೈಸೆಯೂ ಪರಿಹಾರ ಕೊಟ್ಟಿಲ್ಲ ಎಂದು ಬಿಜೆಪಿ ನಾಯಕರಿಗೆ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ ಬಿ ಪಾಟೀಲ್ ಟಾಂಗ್ ಕೊಟ್ಟಿದ್ದಾರೆ.
ಕೃಷ್ಣಾ ತೀರದ ಜನರಿಗೆ ಬಜೆಟ್ ನಲ್ಲಿ ಕಾಂಗ್ರೆಸ್ ಅನ್ಯಾಯ ಮಾಡಿದೆ ಎಂಬ ಮಾಜಿ ಸಚಿವ ಮುರುಗೇಶ ನಿರಾಣಿ ಆರೋಪಕ್ಕೆ ಇಂದು ಬೆಳಗಾವಿಯ ಪ್ರವಾಸಿ ಮಂದಿರದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಐದು ಸಾವಿರ ಕೋಟಿ ರೂಪಾಯಿ ಮೀಸಲಿಟ್ಟಿದ್ದೇವೆ ಎಂದಿರುವ ನಿರಾಣಿಯವರು ಎಷ್ಟು ಖರ್ಚು ಮಾಡಿದ್ದಾರೆ. ಇಬ್ಬರಿಗಷ್ಟೇ ಸಾಂಕೇತಿವಾಗಿ ಚೆಕ್ ಕೊಟ್ಟಿದ್ದಾರೆ. ಆದರೆ ಅವರಿಗೂ ಹಣ ಮುಟ್ಟಿಲ್ಲ. ರಾಜಕೀಯ ಮಾಡಲು ನನ್ನ ಕ್ಷೇತ್ರಕ್ಕೆ ಬಂದು ಕಾರ್ಯಕ್ರಮ ನಡೆಸಿದ್ದರು. ಆದರೆ, ಒಂದು ರೂಪಾಯಿನ್ನೂ ಸಹ ಅವರು ಕೊಟ್ಟಿಲ್ಲ. ಸುಮ್ಮನೇ ಕಣ್ಣೊರೆಸುವ ತಂತ್ರ ಮಾಡಿದ್ದಾರೆ ಎಂದು ತಿರುಗೇಟು ಕೊಟ್ಟರು.
ಹಿಂದಿನ ಸರ್ಕಾರದ ಬಜೆಟ್ ನಲ್ಲಿ ಲೋಕೋಪಯೋಗಿ ಇಲಾಖೆಯಲ್ಲಿ 4-5 ಕೋಟಿ ಹೆಚ್ಚುವರಿ ಟೆಂಡರ್ ಕರೆದಿದ್ದಾರೆ. ಅದೇ ರೀತಿ ನೀರಾವರಿ ಇಲಾಖೆಯಲ್ಲಿ 10-15 ಸಾವಿರ ಕೋಟಿ ಹೆಚ್ಚುವರಿ ಟೆಂಡರ್ ಮಾಡಿದ್ದಾರೆ. ಗ್ಯಾರಂಟಿ ಯೋಜನೆಗಳಿಗೆ 32 ಸಾವಿರ ಕೋಟಿ ಕೊಟ್ಟಿದ್ದೇವೆ. ರೈತರಿಗೆ ಬಡ್ಡಿರಹಿತ ಸಾಲ 3 ಲಕ್ಷದಿಂದ 5 ಲಕ್ಷ ರೂ. ಏರಿಸಿದ್ದೇವೆ. ಬಂದ್ ಆಗಿದ್ದ ಕೃಷಿ ಹೊಂಡ ಆರಂಭಿಸಿದ್ದೇವೆ. 8-9 ತಿಂಗಳಲ್ಲಿ ಮತ್ತೆ ಹೊಸ ಬಜೆಟ್ ಬರುತ್ತದೆ. ಆಗ ಹೆಚ್ಚಿನ ಯೋಜನೆಗಳಿಗೆ ಹಣ ಮೀಸಲಿಡುತ್ತೇವೆ ಎಂದು ಹೇಳಿದರು.