ರಾಯಚೂರು : ರೈತರ ಅನುಕೂಲಕ್ಕೆ ಕೇಂದ್ರ ಸರ್ಕಾರ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ ಜಾರಿ ಮಾಡಿದೆ. ಈ ಯೋಜನೆಯಡಿ ಅರ್ಹ ಫಲಾನುಭವಿಗಳು ಮಾತ್ರ ಲಾಭ ಪಡೆದುಕೊಳ್ಳಬೇಕು. ಆದರೆ, ರೈತರಿಗೆ ಯಾವುದೇ ಮಾಹಿತಿ ನೀಡದೆ ಅವರ ಹೆಸರನ್ನು ಬಳಸಿಕೊಂಡು ಲಕ್ಷಾಂತರ ರೂಪಾಯಿ ಹಣ ಕಬಳಿಸಿರುವ ಆರೋಪ ಕೇಳಿ ಬಂದಿದ್ದು, ಜಿಲ್ಲೆಯ ಅನ್ನದಾತರು ಕಂಗಾಲಾಗುವಂತೆ ಮಾಡಿದೆ.
ಜಿಲ್ಲೆಯ ಸಿರವಾರ ತಾಲೂಕಿನ ಸಣ್ಣಹೊಸೂರು, ಮಾಡಗಿರಿ, ಹರವಿ ಸೇರಿದಂತೆ ಇನ್ನಿತರೆ ಗ್ರಾಮಗಳಲ್ಲಿ ಮಾಹಿತಿ ನೀಡದೆ 40ಕ್ಕೂ ಹೆಚ್ಚು ರೈತರ ಪಹಣಿ ದುರ್ಬಳಕೆ ಮಾಡಿಕೊಂಡು ಸುಮಾರು 75 ಲಕ್ಷದಿಂದ ಒಂದೂವರೆ ಕೋಟಿ ರೂ. ವರೆಗೆ ಗೋಲ್ಮಾಲ್ ಮಾಡಲಾಗಿದೆ. ಕಂದಾಯ ಇಲಾಖೆ, ಕೃಷಿ ಇಲಾಖೆ ಅಧಿಕಾರಿಗಳು ಹಾಗೂ ವಿಮಾ ಕಂಪನಿ ಸಿಬ್ಬಂದಿ ಜೊತೆಗೂಡಿ ರೈತರ ಪಹಣಿ ಬಳಸಿ ವಿಮೆ ಹಣ ಎತ್ತುವಳಿ ಮಾಡಿದ್ದಾರೆ ಎಂದು ರೈತರು ಆರೋಪಿಸಿದ್ದಾರೆ.
ಜಮೀನಿನ ಬೆಳೆಗೆ ವಿಮೆ ಮಾಡಿಸಲು ರೈತರು ಗ್ರಾಮ ಒನ್ ಕೇಂದ್ರಗಳಿಗೆ ಹೋದ ಸಂದರ್ಭದಲ್ಲಿ ವಿಮಾ ಕಂಪನಿಯಿಂದ ಈ ಗೋಲ್ಮಾಲ್ ನಡೆದಿರುವುದು ಬಯಲಾಗಿದೆ. ಹೆಚ್ಚು ಮಳೆಯಿಂದಾಗಿ ಹಳ್ಳ ಬಂದು ರೈತರ ಬೆಳೆ ಹಾನಿಯಾಗಿತ್ತು. ಈ ಹಣ ಹಾನಿಯಾದ ರೈತರ ಖಾತೆಗೆ ಸಂದಾಯವಾಗುವ ಬದಲು ಬೇರೆಯವರ ಖಾತೆಗೆ ಜಮೆ ಆಗಿದೆ. ಹೀಗಾಗಿ, ಇನ್ಸೂರೆನ್ಸ್ ಕಂಪನಿ ಹಾಗೂ ಅಧಿಕಾರಿಗಳ ವಿರುದ್ಧ ಹೋರಾಟಕ್ಕೆ ರೈತರು ಸಿದ್ಧವಾಗಿದ್ದಾರೆ. ನಮಗೆ ಇನ್ನೂ ವಿಮೆ ಪರಿಹಾರ ಬಂದಿಲ್ಲ, ನಮ್ಮ ಜಮೀನಿನ ಮೇಲೆ ಇನ್ಯಾರೋ ಪರಿಹಾರ ಪಡೆದಿದ್ದಾರೆ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
2022 – 2023 ನೇ ಸಾಲಿನಲ್ಲಿ ಮುಂಗಾರು ಮಳೆ ವಿಪರಿತವಾದ ಹಿನ್ನೆಲೆ ಹಳ್ಳದ ನೀರಿಗೆ ಬೆಳೆ ಕೊಚ್ಚಿಹೋಗಿ ನಷ್ಟ ಉಂಟಾಗಿತ್ತು. ಈ ಸಮಯದಲ್ಲಿ ಕೆಲ ರೈತರು ಬೆಳೆ ವಿಮೆ ಮಾಡಿಸಿದ್ದರೆ, ಇನ್ನೂ ಕೆಲವರು ಮಾಡಿಸಿರಲಿಲ್ಲ. ಇದರಲ್ಲಿ ಬೆಳೆ ವಿಮೆ ಪಾವತಿ ಮಾಡಿದ ರೈತರಲ್ಲಿ ಕೆಲವರಿಗೆ ಹಣ ಬಂದಿದ್ದು, ಉಳಿದವರಿಗೆ ಗೋಲ್ಮಾಲ್ನಿಂದಾಗಿ ಬೇರೆಯವರ ಖಾತೆಗೆ ಹಣ ಹೋಗಿದೆ. ಈ ಬಗ್ಗೆ ರೈತರಿಂದ ಲಿಖಿತ ದೂರು ಪಡೆದಿರುವ ಜಂಟಿ ಕೃಷಿ ನಿರ್ದೇಶಕಿ ಆರ್. ದೇವಿಕಾ ಅವರು ಜಿಲ್ಲೆಯ ಹಲವು ಕಡೆಯಲ್ಲಿ ಇದೇ ರೀತಿ ಗೋಲ್ಮಾಲ್ ನಡೆದಿರುವ ಸಾಧ್ಯತೆಯಿದೆ. ಪರಿಶೀಲಿಸಿ ತಪ್ಪಿತಸ್ಥರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವುದಾಗಿ ಹೇಳಿದ್ದಾರೆ. ಸದ್ಯಕ್ಕೆ ಈ ಕುರಿತಂತೆ ಸಿರವಾರ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಿಸಿರುವುದಾಗಿ ತಿಳಿಸಿದ್ದಾರೆ.