Breaking News

ಉತ್ತರಕನ್ನಡ ಜಿಲ್ಲೆಯಲ್ಲಿ ವ್ಯಾಪಕ ಮಳೆ: ಶಾಲಾ, ಕಾಲೇಜುಗಳಿಗೆ ಇಂದು ರಜೆ

Spread the love

ಕಾರವಾರ: ರಾಜ್ಯದಲ್ಲಿ ಕೆಲವೆಡೆ ಮುಂಗಾರು ಕ್ಷೀಣವಾಗಿದ್ದರೆ, ಕರಾವಳಿ ಜಿಲ್ಲೆಗಳು ಹಾಗೂ ಘಟ್ಟದ ಮೇಲ್ಭಾಗದ ಕೆಲವು ತಾಲೂಕುಗಳಲ್ಲಿ ವರ್ಷಧಾರೆ ಬಿರುಸು ಪಡೆದಿದೆ. ಮಂಗಳವಾರ ಸುರಿದ ಭಾರಿ ಮಳೆಗೆ ಭಟ್ಕಳ, ಕಾರವಾರದ ಬಳಿ ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ತಗ್ಗು ಪ್ರದೇಶಗಳು ಜಲಾವೃತಗೊಂಡವು. ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲಾಡಳಿತ ತಾಲೂಕುಗಳ ಶಾಲಾ, ಕಾಲೇಜುಗಳಿಗೆ ಬುಧವಾರ ರಜೆ ಘೋಷಿಸಿದೆ.

ಕಾರವಾರದಲ್ಲಿ ಮಂಗಳವಾರ ಸಂಜೆ ಬಳಿಕ ಒಂದು ಗಂಟೆಗೂ ಹೆಚ್ಚು ಕಾಲ ಸುರಿದ ಜಡಿ ಮಳೆಗೆ ನಗರದ ಗ್ರೀನ್ ಸ್ಟ್ರೀಟ್ ರಸ್ತೆ, ಹೈಚರ್ಚ್ ಬಳಿ, ಹಬ್ಬುವಾಡ ರಸ್ತೆ, ಪದ್ಮನಾಭನಗರ ಜಲಾವೃತಗೊಂಡಿತು. ಹಬ್ಬುವಾಡದ ಬಳಿ ಬಸ್ ಡಿಪೋಗೆ ನೀರು‌ ನುಗ್ಗಿತು. ಅರಗಾದ ಬಳಿಯೂ ರಾಷ್ಟ್ರೀಯ ಹೆದ್ದಾರಿಯಲ್ಲಿ ನೀರು ತುಂಬಿಕೊಂಡು ಪ್ರಯಾಣಿಕರು ಸಂಚಾರ ನಡೆಸಲು ಪರದಾಡಿದರು.

ಭಟ್ಕಳದಲ್ಲಿ ಮಳೆಯಾಯಿಂದಾಗಿ ರಂಗೀಕಟ್ಟೆ, ಶಂಶುದ್ಧೀನ್ ಸರ್ಕಲ್, ಮಣ್ಕುಳಿ ಭಾಗದ ರಾಷ್ಟ್ರೀಯ ಹೆದ್ದಾರಿ ತುಂಬ ನೀರು ತುಂಬಿಕೊಂಡಿದೆ. ದ್ವಿಚಕ್ರ ವಾಹನಗಳು, ಲಘು ವಾಹನಗಳ ಸೈಲೆನ್ಸರ್​ ಒಳಗೆ ನೀರು ನುಗ್ಗಿ ಬಂದ್ ಆದ ಪ್ರಸಂಗವೂ ನಡೆಯಿತು.

ತೀರದ ಸಮಸ್ಯೆ: ಮಳೆಯಿಂದಾಗಿ ಕಳೆದ ವರ್ಷ ಕೋಗ್ತಿ ಬೈಲಿನ ಪ್ರದೇಶ ತೀವ್ರ ತೊಂದರೆಗೀಡಾಗಿತ್ತು. ಮನೆಗಳಿಗೆ ನೀರು ನುಗ್ಗಿ ಜನರು ಸಂಕಷ್ಟ ಅನುಭವಿಸಿದ್ದರು. ಸಹಾಯಕ ಆಯುಕ್ತರು ಪರಿಶೀಲಿಸಿ ಐಆರ್​​ಬಿ ಇಂಜಿನಿಯರ್‌ಗಳನ್ನು ಕರೆಯಿಸಿ ರಂಗೀಕಟ್ಟೆಯಲ್ಲಿರುವ ಮೋರಿಯನ್ನು ಸ್ವಚ್ಚಗೊಳಿಸುವುದು ಸೂಚಿಸಿದ್ದರು. ವರ್ಷ ಕಳೆದರೂ ಇಲ್ಲಿ ಯಾವುದೇ ಕಾಮಗಾರಿ ನಡೆಯದ ಕಾರಣ ಈ ಬಾರಿ ಮತ್ತೆ ನೀರು ನುಗ್ಗಿದೆ. ಮಳೆ ಮುಂದುವರಿದರೆ ಅಪಾಯದ ಮಟ್ಟವನ್ನು ಮೀರುವ ಸಾಧ್ಯತೆ ಇದ್ದು, ಅಧಿಕಾರಿಗಳು ಕಾಳಜಿ ಕೇಂದ್ರಗಳನ್ನು ತೆರೆಯಲು ಸಿದ್ಧತೆ ಮಾಡಿಕೊಂಡಿದ್ದಾರೆ.

ಹೊನ್ನಾವರ ತಾಲೂಕಿನ ಗುಣವಂತೆ ನಾಜಗಾರ, ಮಂಕಿ ಕಾಸರಕೋಡ ಭಾಗದಲ್ಲೂ ನೀರು ನಿಂತಿದೆ. ಮೊಲ್ಕೋಡ ಗ್ರಾಮದ ಮಣಿಕಂಠ, ಪ್ರಭಾತ್​ನಗರದ ಪ್ರಕಾಶ ಮೇಸ್ತ್​, ಮಂಕಿ ಬಣಸಾಲೆಯ ಗಣಪತಿ ಸೋಮಯ್ಯ ನಾಯ್ಕ ಅವರ ಮನೆಗಳ ಮೇಲೆ ಮರ ಹಾನಿ ಉಂಟಾಗಿದೆ. ಕಂದಾಯ ಅಧಿಕಾರಿಗಳು ಹಾಗೂ ತಹಶೀಲ್ದಾರ್​ ರವಿರಾಜ ದಿಕ್ಷೀತ್ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆದರು.

ಮಳೆ ಎಲ್ಲಿ, ಎಷ್ಟು?: ಘಟ್ಟದ ಮೇಲ್ಬಾಗದ ಶಿರಸಿ, ಸಿದ್ದಾಪುರದಲ್ಲಿ ವ್ಯಾಪಕ ಮಳೆಯಾಗಿದೆ. ಹವಾಮಾನ ಇಲಾಖೆ ಮಾಹಿತಿಯಂತೆ ಜಿಲ್ಲೆಯಲ್ಲಿ 619 ಮಿ.ಮೀ ಮಳೆಯಾಗಿದೆ. ಈ ಪೈಕಿ ಅಂಕೋಲಾ 120.6 ಮಿ.ಮೀ, ಭಟ್ಕಳ 126 ಮಿ.ಮೀ, ಹೊನ್ನಾವರ 88.2 ಮಿ.ಮೀ, ಕಾರವಾರ 72.4 ಮಿ.ಮೀ, ಕುಮಟಾ 127 ಮಿ.ಮೀ, ಮುಂಡಗೋಡ 20 ಮಿ.ಮೀ, ಸಿದ್ದಾಪುರ 39.5 ಮಿಮೀ, ಶಿರಸಿ 28.8 ಮೀ.ಮೀ, ಯಲ್ಲಾಪುರ 19.4 ಮಿ.ಮೀ, ಜೋಯಿಡಾ 11.4 ಮಿ.ಮೀ, ಹಳಿಯಾಳ 2.4 ಮಿ.ಮೀ, ದಾಂಡೇಲಿ 5.4 ಮಿ.ಮೀ ಮಳೆಯಾಗಿದೆ.

ಆರೆಂಜ್ ಅಲರ್ಟ್: ಉತ್ತರ ಕನ್ನಡ ಜಿಲ್ಲೆಯಾದ್ಯಂತ ಮಂಗಳವಾರ ಹಾಗೂ ಬುಧವಾರ ಬೆಳಗ್ಗೆ 8:30 ರವರೆಗೆ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಇಲ್ಲಿ ಅತಿ ಹೆಚ್ಚು ಮಳೆ ಬೀಳುವ ಬಗ್ಗೆ ಇಲಾಖೆ ಮುನ್ಸೂಚನೆ ನೀಡಿದೆ. ಜುಲೈ 5ರ ಬೆಳಗ್ಗೆ 8:30 ರಿಂದ ಜುಲೈ 7 ರವರೆಗೆ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ.

ಈ ಸಮಯದಲ್ಲಿ ಅಪಾಯಕಾರಿ ಸ್ಥಳಗಳಲ್ಲಿರುವ ಜನರಿಗೆ ಸೂಕ್ತ ತಿಳಿವಳಿಕೆ ನೀಡಿ, ಅಲ್ಲಿನ ಜನ ಹಾಗೂ ಜಾನುವಾರುಗಳನ್ನು ಮುಂಚಿತವಾಗಿ ಸುರಕ್ಷಿತ ಸ್ಥಳಕ್ಕೆ ಸಾಗಿಸುವ ಬಗ್ಗೆ ತಾಲೂಕಾಡಳಿತ ಅಗತ್ಯ ಕ್ರಮ ಕೈಗೊಳ್ಳಬೇಕು. ಜಿಲ್ಲೆಯ ಎಲ್ಲ ಮಟ್ಟದ ಅಧಿಕಾರಿಗಳು ಹಾಗೂ ತಾಲೂಕಿನ ನೋಡಲ್ ಅಧಿಕಾರಿಗಳು ಕೇಂದ್ರಸ್ಥಾನದಲ್ಲಿದ್ದು, ಕರ್ತವ್ಯ ನಿರ್ವಹಿಸಬೇಕು ಎಂದು ಜಿಲ್ಲಾಡಳಿತ ಸೂಚಿಸಿದೆ. ಪ್ರಕೃತಿ ವಿಕೋಪ ಸಂಬಂಧಿತ ಯಾವುದೇ ಸಮಸ್ಯೆಗಳಿಗೆ ಆಯಾ ತಾಲೂಕು ಆಡಳಿತ, ಇಲ್ಲವೇ ಹೆಲ್ಪ್​ಲೈನ್ 1077, 08284-282723, 7483628982. 8867839350, 08284-295959, 08382-229857 ಸಂಪರ್ಕಿಸುವಂತೆ ತಿಳಿಸಿದೆ.


Spread the love

About Laxminews 24x7

Check Also

ಜನರಲ್ಲಿ ವೈಚಾರಿಕತೆ, ವೈಜ್ಞಾನಿಕತೆ ಬೆಳೆಯದಿದ್ದರೆ, ಕೇವಲ ಮೌಢ್ಯ ನಿಷೇಧ ಕಾನೂನಿನ ಮೂಲಕ ನಿರೀಕ್ಷಿತ ಬದಲಾವಣೆ ಸಾಧ್ಯವಿಲ್ಲ ಎಂದ ಸಿಎಂ

Spread the loveಬೆಂಗಳೂರು: ”ದ್ವಿಭಾಷಾ ಸೂತ್ರ ನನ್ನ ಅಭಿಪ್ರಾಯವಾಗಿದೆ. ಅದನ್ನು ಸರ್ಕಾರದ ಅಭಿಪ್ರಾಯ ಮಾಡುವ ದಿಕ್ಕಿನಲ್ಲಿ ಪ್ರಯತ್ನಿಸುತ್ತೇನೆ” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ