ಬೆಂಗಳೂರು: ಪ್ರಶ್ನೋತ್ತರ ಕಲಾಪಕ್ಕೂ ಮುನ್ನ ನಿಲುವಳಿ ಮಂಡನೆಗೆ ಅವಕಾಶ ಕೇಳಿದ ಬಿಜೆಪಿ ಸದಸ್ಯರಿಗೆ ಅನುಮತಿ ನಿರಾಕರಿಸಿದ ಕಾರಣ ವಿಧಾನಸಭೆ ಮತ್ತು ವಿಧಾನಪರಿಷತ್ನಲ್ಲಿ ಸದನದ ಬಾವಿಗಿಳಿದು ಸರ್ಕಾರದ ವಿರುದ್ಧ ಘೋಷಣೆ ಕೂಗಿ ಧರಣಿ ನಡೆಸಿದ್ದಾರೆ.
ಈ ವೇಳೆ ಸ್ಪೀಕರ್ ಯು.ಟಿ. ಖಾದರ್, ನಿಮ್ಮ ಅನುಚಿತ ವರ್ತನೆಯನ್ನು ಜನರು ನೋಡ್ತಿದ್ದಾರೆ. ಶಾಸಕರ ಪ್ರಶ್ನಾವಳಿಗೆ ಅವಕಾಶ ಕೊಡಿ ಎಂದು ಹೇಳಿದ್ದಾರೆ.
ಇದಕ್ಕೂ ಮುನ್ನ ಸಿಎಂ ಸಿದ್ದರಾಮಯ್ಯ ಮಾತನಾಡಿ, ಪ್ರಶ್ನೋತ್ತರ ಹಾಗೂ ಶೂನ್ಯವೇಳೆ ಆದಮೇಲೆ, ನಿಲುವಳಿ ಪ್ರಸ್ತಾಪಕ್ಕೆ ಅವಕಾಶ ನೀಡಿ ಅಂತ ಬಿಜೆಪಿಯವರು ನೋಟಿಸ್ ನಲ್ಲಿ ಹೇಳಿದ್ದಾರೆ. ಮೂರು ವರ್ಷ ಹತ್ತು ತಿಂಗಳು ಕಾಲ ಅಧಿಕಾರ ಮಾಡಿದವರು ನೀವು, ಸದನದಲ್ಲಿ ನಾನೂ ಲೀಡರ್ ಆಫ್ ಅಪೋಸಿಷನ್ ಆಗಿದ್ದೆ. ಪ್ರಶ್ನೋತ್ತರ ಕಲಾಪಕ್ಕೂ ಮೊದಲು ನಿಲುವಳಿ ಮಂಡನೆಗೆ ಅವಕಾಶ ಇಲ್ಲ. ನಾವೇ ಮಾಡಿಕೊಂಡಿರುವ ನಿಯಮಗಳು ಅವು. ನೀವು ಅಧಿಕಾರದಲ್ಲಿ ಇದ್ದಾಗ ಸ್ಪೀಕರ್ ಆದವರು ಒಂದು ದಿನವೂ ನಮಗೆ ಪ್ರಶ್ನೋತ್ತರಕ್ಕಿಂತ ಮೊದಲು ನಿಲುವಳಿ ಮಂಡನೆಗೆ ಅವಕಾಶ ನೀಡಿರಲಿಲ್ಲ. ನೀಡಿರುವ ಒಂದು ನಿದರ್ಶನ ತೋರಿಸಿಬಿಡಿ ನೋಡೋಣ. ನಾನು ಮಾತೇ ಆಡಲ್ಲ ಕೂತುಬಿಡ್ತೀನಿ ಎಂದು ಹೇಳಿದ ಅವರು, ಈ ಮೊಂಡಾಟ ಬಿಡಿ, ಮೊಂಡಾಟದಿಂದ ಏನೂ ಆಗಲ್ಲ ಎಂದರು.
ಮೊಂಡಾಟ ಪದ ಬಳಕೆಗೆ ಗದ್ದಲ ಮಾಡಿದ ಬಿಜೆಪಿ ಸದಸ್ಯರು, ಮೊಂಡಾಟ ಅಸಂವಿಧಾನ ಪದವಾ? ಎಂದು ಸಿಎಂ ಪ್ರಶ್ನಿಸಿದರು. ಅಲ್ಲದೇ ನೀವು ಕೇಳಿದ ಯಾವುದೇ ಪ್ರಶ್ನೆಗೆ ಉತ್ತರ ನೀಡಲು ನಾವು ತಯಾರಿದ್ದೇವೆ. ವಿಪಕ್ಷಗಳ ಮಾತಿಗೆ ಹೆದರಿಕೊಂಡು ಓಡಿ ಹೋಗಲ್ಲ ನಾವು. ನಾನೂ ಕೂಡ ಎಷ್ಟೇ ಕೂಗಿಕೊಂಡರೂ ಅವರ ಕಾಲದಲ್ಲಿ ನನಗೆ ನಿಲುವಳಿ ಮಂಡನೆಗೆ ಅವಕಾಶ ನೀಡಿರಲಿಲ್ಲ. ಈಗ ಇವರಿಗೂ ಅವಕಾಶ ನೀಡಬಾರದು ಎಂದು ಹೇಳಿದರು.