ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಾಸ್ತು ದೋಷವನ್ನು ಧಿಕ್ಕರಿಸಿ ವಿಧಾನಸೌಧದ ಸಿಎಂ ಕಚೇರಿ ಪ್ರವೇಶಿಸಿದ ಪ್ರಸಂಗ ಶನಿವಾರ ನಡೆಯಿತು.
ವಾಸ್ತುದೋಷದ ಕಾರಣದಿಂದ ಸುಮಾರು ಎರಡು ದಶಕಗಳಿಂದ ಮುಚ್ಚಿದ್ದ ವಿಧಾನಸೌಧದ ಮುಖ್ಯಮಂತ್ರಿ ಕಚೇರಿಯ ದಕ್ಷಿಣದ ದ್ವಾರವನ್ನು ಸಿಎಂ ಸಿದ್ದರಾಮಯ್ಯ ಅವರು ಎರಡನೇ ಬಾರಿಗೆ ತೆಗೆಸುವ ಮೂಲಕ ಮತ್ತೊಮ್ಮೆ ಮೂಢನಂಬಿಕೆಯನ್ನು ವಿರೋಧಿಸಿದ್ದಾರೆ.
ಅನ್ನಭಾಗ್ಯ ಸಂಬಂಧ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಲು ವಿಧಾನಸೌಧಕ್ಕೆ ಆಗಮಿಸಿದ ಮುಖ್ಯಮಂತ್ರಿಗಳು ದಕ್ಷಿಣ ದ್ವಾರ ಬಂದ್ ಆಗಿರುವುದನ್ನು ಗಮನಿಸಿದರು. ವಾಸ್ತು ಕಾರಣದಿಂದ ಬಂದ್ ಮಾಡಲಾಗಿದೆ ಎನ್ನುವ ಉತ್ತರ ಅಧಿಕಾರಿಗಳಿಂದ ಬಂದ ಬಳಿಕ ಮುಖ್ಯಮಂತ್ರಿಗಳು ಆ ದ್ವಾರದಲ್ಲೇ ನಿಂತು. ಪಶ್ಚಿಮ ದ್ವಾರದಿಂದ ಸಿಬ್ಬಂದಿ ಒಳಗೆ ಹೋಗಿ ದಕ್ಷಿಣದ ದ್ವಾರವನ್ನು ತೆರೆದ ಬಳಿಕ ಅದೇ ದ್ವಾರದ ಮೂಲಕವೇ ತಮ್ಮ ಕಚೇರಿಯನ್ನು ಸಿಎಂ ಸಿದ್ದರಾಮಯ್ಯ ಪ್ರವೇಶಿಸಿದರು.
ಆರೋಗ್ಯಕರ ಮನಸ್ಸು, ಸ್ವಚ್ಛ ಹೃದಯ, ಜನಪರ ಕಾಳಜಿ, ಒಳ್ಳೆ ಗಾಳಿ, ಬೆಳಕು ಬರುವಂತಿದ್ದರೆ ಅದೇ ಉತ್ತಮ ವಾಸ್ತು ಎಂದು ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ತಿಳಿಹೇಳಿದರು. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿರುವ ಸಿದ್ದರಾಮಯ್ಯ ಅವರು, ” ಜನರ ಬಗ್ಗೆ ಕಾಳಜಿ, ನಡತೆಯಲ್ಲಿ ಪ್ರಾಮಾಣಿಕತೆ ಹಾಗೂ ಕರ್ತವ್ಯದಲ್ಲಿ ನಿಷ್ಠೆ ನಮ್ಮೊಳಗಿದ್ದರೆ ದಿಕ್ಕು, ಘಳಿಗೆ, ಮುಹೂರ್ತ ಎಲ್ಲವೂ ನಗಣ್ಯ” ಎಂದು ಹೇಳಿದ್ದಾರೆ.
ವಾಸ್ತು ದೋಷಕ್ಕಾಗಿ ಮುಚ್ಚಿದ್ದ ವಿಧಾನಸೌಧದ ಮುಖ್ಯಮಂತ್ರಿಗಳ ಕಚೇರಿಯ ದಕ್ಷಿಣ ದ್ವಾರವನ್ನು ತೆರೆಸಿ ಅದೇ ಬಾಗಿಲಿನಿಂದ ಕಚೇರಿ ಪ್ರವೇಶ ಮಾಡಿದೆ. ಕೊಠಡಿಯೊಳಗೆ ಒಳ್ಳೆಯ ಗಾಳಿ, ಬೆಳಕು ಬರುವಂತಿದ್ದರೆ ಅದಕ್ಕಿಂತ ಉತ್ತಮ ವಾಸ್ತು ಬೇರಿಲ್ಲ. ನಡೆ-ನುಡಿ ಶುದ್ಧವಿದ್ದರೆ ಮತ್ತೆಲ್ಲವೂ ಶುಭದಾಯಕವಾಗಿರಲಿದೆ. ಜನತೆಯ ಆಶೀರ್ವಾದ ಇರಲಿ ಎಂದು ಮನವಿ ಮಾಡಿದ್ದಾರೆ. 1999-2004 ರ ಅವಧಿಯಲ್ಲಿ ಎಸ್. ಎಂ. ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದ ವೇಳೆ ವಾಸ್ತುಗೆ ಪೂರಕವಲ್ಲ ಎಂಬ ಕಾರಣಕ್ಕೆ ದಕ್ಷಿಣದ ಬಾಗಿಲು ಮುಚ್ಚಲಾಗಿತ್ತು.
Laxmi News 24×7