ಬೆಳಗಾವಿ: ಮಳೆಗಾಗಿ ಕೈಗೊಂಡಿದ್ದ ಸಾಮೂಹಿಕ ಪ್ರಾರ್ಥನೆ ವೇಳೆ ಮುಸ್ಲಿಂ ಬಾಂಧವರು ಕಣ್ಣೀರು ಹಾಕಿರುವ ಘಟನೆ ನಗರದಲ್ಲಿ ನಡೆದಿದೆ. ರಾಜ್ಯದಲ್ಲಿ ಮುಂಗಾರು ಚುರುಕುಗೊಂಡಿದ್ದರೂ ಬೆಳಗಾವಿ ಸೇರಿ ಉತ್ತರ ಕರ್ನಾಟಕ ಭಾಗದಲ್ಲಿ ಮಳೆಯಾಗುತ್ತಿಲ್ಲ. ಇದರಿಂದ ನಗರದ ಅಂಜುಮನ್ ಸಂಸ್ಥೆಯ ಈದ್ಗಾ ಮೈದಾನದಲ್ಲಿ ಮಳೆಗಾಗಿ ಸಾವಿರಾರು ಮುಸ್ಲಿಂ ಬಾಂಧವರು ಪ್ರಾರ್ಥನೆ ಸಲ್ಲಿಸಿದರು. ಧರ್ಮಗುರು ಮುಫ್ತಿ ಅಬ್ದುಲ್ ಅಜೀಜ್ ಖಾಜಿ ನೇತೃತ್ವದಲ್ಲಿ ನಡೆದ ಸಾಮೂಹಿಕ ಪ್ರಾರ್ಥನೆಯಲ್ಲಿ ಭಾವುಕರಾದ ಮುಸ್ಲಿಂ ಬಾಂಧವರು ‘ಅಲ್ಹಾ ಮಳೆ ಕರುಣಿಸು’ ಎಂದು ಕಣ್ಣೀರಿಟ್ಟರು.
ಪ್ರಾರ್ಥನೆಯಲ್ಲಿ ಭಾಗಿಯಾಗಿದ್ದ ಬೆಳಗಾವಿ ಉತ್ತರ ಕಾಂಗ್ರೆಸ್ ಶಾಸಕ ಆಸೀಫ್ ಸೇಠ್ ಮಾಧ್ಯಮಗಳ ಜೊತೆಗೆ ಮಾತನಾಡಿ, ಮೇ ತಿಂಗಳಲ್ಲೆ ಬೆಳಗಾವಿ ಮತ್ತು ಉತ್ತರಕರ್ನಾಟಕದಲ್ಲಿ ಮಳೆ ಆರಂಭವಾಗುತ್ತಿತ್ತು. ಅದರೆ, ಜೂನ್ ಕೊನೆ ವಾರ ಬಂದರೂ ಮಳೆ ಆಗುತ್ತಿಲ್ಲ. ಇದರಿಂದ ರಾಕಸಕೊಪ್ಪ ಮತ್ತು ಹಿಡಕಲ್ ಡ್ಯಾಮ್ನಲ್ಲಿ ನೀರು ಖಾಲಿಯಾಗುತ್ತಿದೆ. ಹೀಗಾಗಿ ಮಳೆಯಾಗಲಿ ಎಂದು ಸಾಮೂಹಿಕ ಪ್ರಾರ್ಥನೆ ಸಲ್ಲಿಸುತ್ತಿದ್ದೇವೆ. ಇವತ್ತು ಮಳೆ ಆಗದಿದ್ದರೆ ಮತ್ತೆ ನಾಳೆ ಪ್ರಾರ್ಥನೆ ಮಾಡುತ್ತೇವೆ ಎಂದರು.
ಮಳೆಗಾಗಿ ಸಾಮೂಹಿಕ ಪ್ರಾರ್ಥನೆ
ಪ್ರಾರ್ಥನೆಯಲ್ಲಿ ಅನೇಕರು ಕಣ್ಣೀರು ಹಾಕಿದ ಬಗ್ಗೆ ಪ್ರತಿಕ್ರಿಯಿಸಿದ ಆಸೀಫ್ ಸೇಠ್, ಜನಜಾನುವಾರುಗಳಿಗೆ ಕುಡಿಯುವ ನೀರಿಗಾಗಿ ಹಾಹಾಕಾರ ಶುರುವಾಗಿದೆ. ನೆನೆದು ಪ್ರಾರ್ಥನೆ ವೇಳೆ ಕೆಲವರು ಕಣ್ಣೀರು ಹಾಕಿ ಪ್ರಾರ್ಥಿಸಿದ್ದಾರೆ. ಎಲ್ಲ ಧರ್ಮಿಯರು ಅವರ ಆಚಾರಗಳಿಗೆ ತಕ್ಕ ಹಾಗೆ ಪೂಜೆ ಸಲ್ಲಿಸುತ್ತಿದ್ದಾರೆ ಎಂದರು. ಮಳೆಗಾಗಿ ಇಂದಿನಿಂದ ಮುಸಲ್ಮಾನರು ಮೂರು ದಿನಗಳ ಕಾಲ ಪ್ರಾರ್ಥನೆ ಹಮ್ಮಿಕೊಂಡಿದ್ದು, ಇಂದು ಮಳೆ ಆಗದಿದ್ರೆ ಮತ್ತೆ ನಾಳೆ ಬೆಳಗ್ಗೆ 9.30ಕ್ಕೆ ಮತ್ತೆ ಸಾಮೂಹಿಕ ಪ್ರಾರ್ಥನೆಗೆ ನಿರ್ಧರಿಸಿದ್ದಾರೆ.
Laxmi News 24×7