ಬೆಳಗಾವಿ: ಮಹದಾಯಿ (Mahadayi River) ನದಿ ನೀರು ಹಂಚಿಕ ವಿಚಾರವಾಗಿಕರ್ನಾಟಕ(Karnataka) ಹಾಗೂ ಗೋವಾ (Goa) ರಾಜ್ಯಗಳ ನಡುವೆ ದಶಕಗಳಿಂದ ಹೋರಾಟ ನಡೆಯುತ್ತಿದೆ. ಇದೀಗ ಕರ್ನಾಟಕದಲ್ಲಿ ಕಾಂಗ್ರೆಸ್ (Congress) ಅಧಿಕಾರಕ್ಕೆ ಬರುತ್ತಿದ್ದಂತೆ ಮಹಾರಾಷ್ಟ್ರ (Maharashtra) ಹಾಗೂ ಗೋವಾ ಸರ್ಕಾರ ಒಗ್ಗಟ್ಟಾಗಿ “ಮಹದಾಯಿ ವಿಚಾರದಲ್ಲಿ ಹೋರಾಟ” ನಡೆಸಲು ಮುಂದಾಗಿವೆ. ಹೌದು ಒಂದಡೆ ಗಡಿ ಕ್ಯಾತೆ ತೆಗೆಯುತ್ತಿರುವ ಮಹರಾಷ್ಟ್ರ ಇದೀಗ ಮಹದಾಯಿ ವಿಚಾರದಲ್ಲೂ ಮೂಗು ತೂರಿಸಿದೆ. ಗೋವಾ ಮತ್ತು ಮಹಾರಾಷ್ಟ್ರ ಈ ಎರಡೂ ರಾಜ್ಯಗಳು ಸಹೋದರರಿದ್ದಂತೆ. ಮಹದಾಯಿ ನೀರಿನ ಹೋರಾಟ ಮೂರು ರಾಜ್ಯಗಳ ಪ್ರಶ್ನೆಯಾಗಿದ್ದು, ಮಹಾರಾಷ್ಟ್ರ ಮತ್ತು ಗೋವಾ ಈ ಹೋರಾಟವನ್ನು ಒಟ್ಟಾಗಿ ಎದುರಿಸಲಿವೆ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಹೇಳಿದ್ದಾರೆ.
ಮಹಾರಾಷ್ಟ್ರದ ತಿಲಾರಿ ಅಣೆಕಟ್ಟು ಯೋಜನೆ ಸಂಬಂಧ ಸಭೆ ನಿನ್ನೆ (ಜೂ.17) ರಂದು ಮುಂಬೈನಲ್ಲಿ ನಡೆದಿದ್ದ ಅಂತಾರಾಜ್ಯ ನಿಯಂತ್ರಣ ಮಂಡಳಿ ಸಭೆ ನಡೆಯಿತು. ಸಭೆಯಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂಧೆ, ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್, ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಮತ್ತು ಗೋವಾ ಜಲಸಂಪನ್ಮೂಲ ಸಚಿವ ಸುಭಾಷ್ ಶಿರೋಡ್ಕರ್ ಭಾಗಿಯಾಗಿದ್ದರು.
ದಶಕದ ಬಳಿಕ ನಡೆದ ಅಂತಾರಾಜ್ಯ ನಿಯಂತ್ರಣ ಮಂಡಳಿ ಸಭೆಯಲ್ಲಿ ತಿಲಾರಿ ಅಣೆಕಟ್ಟು ಯೋಜನೆ ನೆಪದಲ್ಲಿ ಮಹದಾಯಿ ವಿವಾದದ ಬಗ್ಗೆ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆಸಲಾಗಿದೆ. ಕರ್ನಾಟಕದ ಗಡಿಗೆ ಹೊಂದಿಕೊಂಡಿರುವ ಕೊಲ್ಲಾಪುರ ಜಿಲ್ಲೆಯ ತಿಲಾರಿ ಅಣೆಕಟ್ಟು ಬಗ್ಗೆ ಚರ್ಚಿಸಲು ಸಭೆ ಸೇರಲಾಗಿತ್ತು.
ಸಭೆಯಲ್ಲಿ ಮಹದಾಯಿ ನೀರಿಗಾಗಿ ಗೋವಾ ಮತ್ತು ಮಹಾರಾಷ್ಟ್ರ ಒಟ್ಟಾಗಿ ಕರ್ನಾಟಕದ ವಿರುದ್ಧ ಹೋರಾಟ ಮಾಡುತ್ತೇವೆ ಎಂದು ಶಿಂಧೆ ಹೇಳಿದ್ದಾರೆ. ಇದರಿಂದಾಗಿ ಮಹದಾಯಿ ಹೋರಾಟ ಇನ್ನಷ್ಟು ತೀವ್ರಗೊಳ್ಳುವ ಸಾಧ್ಯತೆಯಿದೆ ಎಂದೇ ಹೇಳಲಾಗುತ್ತಿದೆ.
ಮಹಾದಾಯಿ ನೀರು ಹಂಚಿಕೆಯಲ್ಲಿ ಮಹಾರಾಷ್ಟ್ರ ಪಾಲು ತೀರಾ ಕಡಿಮೆ ಇದೆ. 2018 ರಲ್ಲಿ ನ್ಯಾಯಮಂಡಳಿಯು ಮಹದಾಯಿ ನದಿ ಜಲಾನಯನ ಪ್ರದೇಶದಿಂದ ಕರ್ನಾಟಕಕ್ಕೆ 13.42 ಟಿಎಂಸಿ, ಮಹಾರಾಷ್ಟ್ರಕ್ಕೆ 1.33 ಟಿಎಂಸಿ ಮತ್ತು ಗೋವಾಕ್ಕೆ 24 ಟಿಎಂಸಿ ನೀರನ್ನು ನೀಡಿತು. ಕರ್ನಾಟದಕದ ಪಾಲಿಗೆ ದೊರೆತ ನೀರು 5.5 ಟಿಎಂಸಿಕುಡಿಯುವ ನೀರಿನ ಪೂರೈಕೆ ಹಾಗೂ 8.02 ಟಿಎಂಸಿ ನೀರು ಜಲವಿದ್ಯುತ್ ಉತ್ಪಾದನೆಗೆ ಎಂದು ಹಂಚಿಕೆಯಾಗಿತ್ತು.ಹೀಗಿದ್ದರೂ ಕರ್ನಾಟಕ ವಿರುದ್ಧ ಹಗೆ ಸಾಧಿಸಲು ಗೋವಾ ಜೊತೆಗೆ ಮಹಾರಾಷ್ಟ್ರ ಸರ್ಕಾರ ಕೈ ಜೋಡಿಸಿದೆ.