ಚಿಕ್ಕೋಡಿ: ಗ್ಯಾರಂಟಿ ಯೋಜನೆಗಳನ್ನು ಅರ್ಜಿ ಹಾಕಲು ಕೇಂದ್ರ ಸರ್ಕಾರ ಕಂಪ್ಯೂಟರ್ ಸರ್ವರ್ ಹ್ಯಾಕ್ ಮಾಡಿದೆ ಎಂಬ ಹೇಳಿಕೆ ನೀಡಿದ್ದೆನು. ಆದರೆ ಇದೊಂದು ರಾಜಕೀಯ ಹೇಳಿಕೆ. ಬಿಜೆಪಿಯವರು ಇಂಥ ಹೇಳಿಕೆಗಳನ್ನು ಬಹಳ ಸಲ ಹೇಳಿದ್ದುಂಟು. ಇವೆಲ್ಲ ರಾಜಕೀಯ ಎಂದು ಸರ್ವರ್ ಹ್ಯಾಕ್ ವಿಚಾರಕ್ಕೆ ಸಚಿವ ಸತೀಶ್ ಜಾರಕಿಹೊಳಿ ಇಂದು ಸ್ಪಷ್ಟೀಕರಣ ನೀಡಿದ್ದಾರೆ.
ಬೆಳಗಾವಿ ಜಿಲ್ಲೆಯ ಹುಕ್ಕೇರಿ ಪಟ್ಟಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರ ರಾಜ್ಯದ ಕೆಲವು ಸರ್ವರ್ ಹ್ಯಾಕ್ ಮಾಡಿದೆ ಎಂಬ ಹೇಳಿಕೆಗೆ ಬಿಜೆಪಿಯವರು ಏನೇನೋ ಮಾತನಾಡುತ್ತಿದ್ದಾರೆ. ನಾನು ರಾಜಕೀಯವಾಗಿ ಅಷ್ಟೇ ಮಾತನಾಡಿರುವೆ. ಇದು ಸ್ವಾಭಾವಿಕ, ಆದರೆ ಬಿಜೆಪಿಯವರು ಸಹ ಇಂತಹ ಬೇರೆ ಬೇರೆ ಹೇಳಿಕೆಗಳನ್ನು ನೀಡಿದ್ದಾರೆ ಎಂದರು.
ನಮ್ಮ ಹತ್ತಿರ ಬಿಜೆಪಿ ನಾಯಕರ ಹೇಳಿಕೆಗಳು ನೂರಾರು ಇವೆ. ಕೇಂದ್ರ ಸಚಿವರು ರಾಜ್ಯ ಬಿಜೆಪಿ ವರಿಷ್ಠರು ಇಂಥ ಹೇಳಿಕೆ ನೀಡಿದ್ದಾರೆ. ಅದಕ್ಕೆಲ್ಲಾ ಅವರು ಉತ್ತರ ಕೊಡುತ್ತಾರಾ?, ಅವರು ಮಾತನಾಡಿರುವುದರ ಬಗ್ಗೆ ನಾವು ಒಂದು ದೊಡ್ಡ ಲಿಸ್ಟ್ ಕೊಡ್ತೀವಿ. ಅವರು ಏನಾದರೂ ನನ್ನ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವದಾದರೆ ಕೈಗೊಳ್ಳಲಿ ಎಂದು ಪ್ರತಿಕ್ರಿಯೆ ನೀಡಿದರು.