ಬೆಂಗಳೂರು: ಬೈಕ್ಅನ್ನು ಪಕ್ಕಕ್ಕೆ ಸರಿಸಲು ಹೇಳಿದ್ದಕ್ಕೆ ಚಾಕುವಿಂದ ಹಲ್ಲೆ ಮಾಡಿದ್ದ ರೌಡಿಶೀಟರ್ ಸಹಿತ ನಾಲ್ವರು ಆರೋಪಿಗಳನ್ನ ಬನಶಂಕರಿ ಠಾಣಾ ಪೊಲೀಸರು ಬಂಧಿಸಿದ್ದಾರೆ.
ರೌಡಿ ಶೀಟರ್ ಸಂದೀಪ್ ಮತ್ತು ಶಶಾಂಕ್, ಕಿರಣ್, ಶ್ರೀಧರ್ ಬಂಧಿತ ಆರೋಪಿಗಳು. ಇದೇ ತಿಂಗಳ 18ರಂದು ರಾತ್ರಿ ಪದ್ಮನಾಭ ನಗರದ ರಾಘವೇಂದ್ರ ಕಾಲೋನಿಯಲ್ಲಿ ಈ ಘಟನೆ ನಡೆದಿತ್ತು.
ಪ್ರದೀಪ್ ಎಂಬಾತನ ಮೇಲೆ ಆರೋಪಿಗಳ ಸಹಿತ ಏಳು ಜನರ ತಂಡ ಹಲ್ಲೆ ಮಾಡಿರುವುದಾಗಿ ಬನಶಂಕರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಫ್ಲೆಕ್ಸ್ಗಳನ್ನ ತರಲು ತೆರಳಿದ್ದ ಪ್ರದೀಪ್, ಮನೆಗೆ ವಾಪಸ್ ತೆರಳಲು ಮುಂದಾದಾಗ ಬೈಕ್ವೊಂದು ಅಡ್ಡಲಾಗಿ ನಿಂತಿತ್ತು. ಆಗ ಪ್ರದೀಪ್ ಬೈಕ್ ಸೈಡಿಗೆ ತೆಗೆಯಿರಿ ನಾನು ಹೋಗಬೇಕು ಎಂದಿದ್ದ. ಅಷ್ಟಕ್ಕೆ ಸಿಟ್ಟಿಗೆದ್ದ ಪ್ರತಾಪ್ ಶೆಟ್ಟಿ ಎಂಬಾತ ಅವಾಚ್ಯ ಪದಗಳಿಂದ ನಿಂದಿಸಿ ಹಲ್ಲೆ ಮಾಡಿದ್ದ. ನಂತರ ಮಾರಕಾಸ್ತ್ರಗಳನ್ನು ಹಿಡಿದು ಬೆದರಿಸಿದ್ದಲ್ಲದೇ ತನ್ನ ಸಹಚರರನ್ನು ಕರೆಸಿ ಪ್ರದೀಪ್ ಜೊತೆಗಿದ್ದವರ ಮೇಲೆಯೂ ಹಲ್ಲೆ ಮಾಡಿದ್ದ. ಹಲ್ಲೆಯ ದೃಶ್ಯಗಳು ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದವು.
ಗಾಯಗೊಂಡಿದ್ದ ಪ್ರದೀಪ್ ಬನಶಂಕರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ನಾಲ್ವರು ಆರೋಪಿಗಳನ್ನ ಬಂಧಿಸಿದ್ದು, ಇನ್ನುಳಿದ ಮೂವರಿಗಾಗಿ ಹುಡುಕಾಟ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ.
ಚರ್ಚ್ ಬಾಗಿಲು ಮುರಿದು ಹಾನಿಗೊಳಿಸಿದ ವ್ಯಕ್ತಿಯ ಬಂಧನ.. ಚರ್ಚ್ ಬಾಗಿಲು ಮುರಿದು ಒಳಗೆ ನುಗ್ಗಿದ ವ್ಯಕ್ತಿಯೊಬ್ಬ ಚರ್ಚ್‌ನ ಕೆಲ ವಸ್ತುಗಳಿಗೆ ಹಾನಿ ಮಾಡಿರುವ ಘಟನೆ ಇಂದು ನಸುಕಿನ ಜಾವ ಕಮ್ಮನಹಳ್ಳಿಯಲ್ಲಿ ನಡೆದಿದೆ. ಸುತ್ತಿಗೆ ಬಳಸಿ ಸೆಂಟ್ ಪಿಯಸ್ ಚರ್ಚ್ ಬಾಗಿಲು ಮುರಿದು, ಹಾನಿಗೊಳಿಸಿದ್ದ ಟಾಮ್ ಮ್ಯಾಥ್ಯೂ (20) ಎಂಬ ಆರೋಪಿಯನ್ನ ಬಾಣಸವಾಡಿ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಇಂದು ಬೆಳಗಿನ ಜಾವ 4:30ರ ಸುಮಾರಿಗೆ ಚರ್ಚ್ ಬಳಿ ಬಂದಿದ್ದ ಟಾಮ್ ಮ್ಯಾಥ್ಯೂ ಸುತ್ತಿಗೆ ಬಳಸಿ ಚರ್ಚ್ ಬಾಗಿಲು ಮುರಿದಿದ್ದ. ಬಳಿಕ ಚರ್ಚ್ ಒಳಗಿರುವ ಕೆಲ ವಸ್ತುಗಳಿಗೆ ಹಾನಿ ಮಾಡಿದ್ದ. ಘಟನೆಯ ಮಾಹಿತಿ ತಿಳಿದ ತಕ್ಷಣ ತ್ವರಿತವಾಗಿ ಆರೋಪಿಯ ವಿಳಾಸ ಪತ್ತೆಹಚ್ಚಿದ ಬಾಣಸವಾಡಿ ಠಾಣಾ ಹೊಯ್ಸಳ ಪೊಲೀಸ್ ಆರೋಪಿಯನ್ನ ಬಂಧಿಸಿದ್ದಾರೆ. ತನಿಖೆ ವೇಳೆ ಆರೋಪಿಯು ಕೌಟುಂಬಿಕ ಸಮಸ್ಯೆಗಳಿಂದ ಮಾನಸಿಕವಾಗಿ ತೊಂದರೆಗೀಡಾಗಿದ್ದ ಎಂದು ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ನೈಟ್ ಸೆಕ್ಯೂರಿಟಿ ಗಾರ್ಡ್ ಮೇಲೆ ಹಲ್ಲೆ.. ನೈಟ್ ಸೆಕ್ಯುರಿಟಿ ಗಾರ್ಡ್ ಮೇಲೆ ಪುಡಿರೌಡಿಯೊಬ್ಬ ಚಾಕುವಿನಿಂದ ಮಾರಣಾಂತಿಕ ಹಲ್ಲೆ ಮಾಡಿರುವ ಘಟನೆ ಸೋಮವಾರ ಬೆಳಗಿನ ಜಾವ 2.30ರ ಸುಮಾರಿಗೆ ಆರ್.ಟಿ. ನಗರದ ಎಂಎಲ್‌ಎ ಲೇಔಟಿನಲ್ಲಿ ನಡೆದಿತ್ತು. ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರ ನಿವಾಸದಿಂದ ಕೂಗಳತೆ ದೂರದಲ್ಲಿಯೇ ಘಟನೆ ನಡೆದಿದ್ದು, ಅಪರಿಚಿತ ಆರೋಪಿಯ ಕೃತ್ಯಕ್ಕೆ ಸೆಕ್ಯುರಿಟಿ ಗಾರ್ಡ್ ಅಲ್ಬರ್ಟ್ ಎಂಬಾತ ಗಂಭೀರವಾಗಿ ಗಾಯಗೊಂಡಿದ್ದರು.
ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದ ಆಲ್ಬರ್ಟ್ ಆರ್. ಟಿ. ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಹಲ್ಲೆ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದವು.