ಬೆಳಗಾವಿ : ಚುನಾವಣೆ ಕಾರಣದಿಂದ ನೀವು ಏನೇನು ಘೋಷಣೆ ಮಾಡಿದ್ದೀರೋ ಅವುಗಳನ್ನು ಜಾರಿಗೆ ತರುವುದು ನಿಮ್ಮ ಜವಾಬ್ದಾರಿ.
ನೀವು ಕೂಡ ಅಕ್ಕಿ ಖರೀದಿ ಮಾಡಲು ಮುಕ್ತ ಮಾರುಕಟ್ಟೆಯಲ್ಲಿ ಅವಕಾಶವಿದೆ. ಉಪಯೋಗ ಮಾಡಿಕೊಳ್ಳಬೇಕೆ ಹೊರತು, ಕೇಂದ್ರದ ಮೇಲೆ ಆರೋಪ ಮಾಡಬಾರದು. ದೇಶದ ಎಲ್ಲಾ ರಾಜ್ಯಗಳನ್ನು ಕೇಂದ್ರ ಸರ್ಕಾರ ಗಮನದಲ್ಲಿ ಇಟ್ಟುಕೊಳ್ಳಬೇಕಾಗುತ್ತದೆ ಎಂದು ರಾಜ್ಯ ಸರ್ಕಾರಕ್ಕೆ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ತಿರುಗೇಟು ನೀಡಿದ್ದಾರೆ.
ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಯಾವುದೇ ಪೂರ್ವ ತಯಾರಿ ಇಲ್ಲದೇ, ರಾಜ್ಯದ ಜನರಿಗೆ ಸುಳ್ಳು ಭರವಸೆ ಕೊಟ್ಟು, ಐದು ಗ್ಯಾರಂಟಿ ಬಗ್ಗೆ ಹೇಳಿದ್ದರಿಂದ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿದೆ. ಅದರಲ್ಲಿ ಪ್ರಮುಖವಾಗಿ ರಾಜ್ಯದ ಜನರಿಗೆ ತಲಾ 10 ಕೆಜಿ ಅಕ್ಕಿ ಘೋಷಣೆಯಾಗಿದೆ. ಕೇಂದ್ರ ಸರ್ಕಾರ ಆಹಾರ ಭದ್ರತಾ ಕಾಯ್ದೆ ಅನ್ವಯ ಬಡತನ ರೇಖೆಗಿಂತ ಕೆಳಗಿರುವವರಿಗೆ ತಲಾ 5 ಕೆಜಿ ಅಕ್ಕಿಯನ್ನು ಅನೇಕ ವರ್ಷಗಳಿಂದ ಉಚಿತವಾಗಿ ಕೊಡುತ್ತಿದೆ. ಅಂತ್ಯೋದಯ ಅನ್ನ ಯೋಜನೆ ಮೂಲಕವೂ ಒಂದು ಕುಟುಂಬದಲ್ಲಿ ಮೂರೇ ಜನ ಇದ್ದರೂ ಕೂಡ 35 ಕೆಜಿ ಅಕ್ಕಿಯನ್ನು ಈಗಾಗಲೇ ನಾವು ವಿತರಣೆ ಮಾಡುತ್ತಿದ್ದೇವೆ. ಇದರಲ್ಲಿ ಕುಟುಂಬ ಸದಸ್ಯರು ಹೆಚ್ಚಿದ್ದರೆ, ಹೆಚ್ಚು ಅಕ್ಕಿ ಕೊಡುತ್ತಿದ್ದೇವೆ. ಕಡಿಮೆ ದರದಲ್ಲಿ ಎಪಿಎಲ್ ಕಾರ್ಡ್ದಾರರಿಗೂ ಅಕ್ಕಿ ವಿತರಣೆ ಮಾಡುತ್ತಿದ್ದೇವೆ ಎಂದರು.
ಕೊರೊನಾ ಬಂದ ಸಂದರ್ಭದಿಂದ ಹಿಡಿದು ಇಲ್ಲಿಯವರೆಗೆ ದೇಶದ 80 ಕೋಟಿ ಜನರಿಗೆ ಉಚಿತವಾಗಿ ಅಕ್ಕಿ ವಿತರಣೆ ಮಾಡುತ್ತಿರುವುದು ಜಗತ್ತಿನಲ್ಲೇ ಮೊದಲು. ಆದರೆ ಕಾಂಗ್ರೆಸ್ ಸುಳ್ಳು ಆರೋಪ ಮಾಡುತ್ತಿದ್ದು, ಜನರ ಕಣ್ಣಿಗೆ ಮಂಕು ಬೂದಿ ಎರಚಲು ಹೊರಟಿದೆ. ‘ನಾವು ಉಚಿತವಾಗಿ 10 ಕೆಜಿ ಅಕ್ಕಿ ಕೊಡುತ್ತೇವೆ ಎಂದು ಹೇಳಿದ್ದೇವೆ. ಆದರೆ ಕೇಂದ್ರ ಸರ್ಕಾರ ನಮಗೆ ಅಕ್ಕಿ ಕೊಡುತ್ತಿಲ್ಲ. ಫುಡ್ ಕಾರ್ಪೋರೇಶನ್ ಆಫ್ ಇಂಡಿಯಾದವರು ನಮಗೆ ಕೊಡುತ್ತೇವೆ ಎಂದು ಹೇಳಿದ್ದರು. ಅದಾದ ಬಳಿಕ ಕೇಂದ್ರ ಪತ್ರ ಬರೆದಿದೆ’ ಎಂಬ ಸುಳ್ಳು ಸಂಗತಿಯನ್ನು ಜನರ ಮಧ್ಯ ಹರಿಬಿಟ್ಟಿದ್ದಾರೆ ಎಂದು ಕಡಾಡಿ ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದರು.