ಮಧ್ಯ ಪ್ರದೇಶದಲ್ಲಿ ಅಮಾನವೀಯ ಘಟನೆಯೊಂದು ಬೆಳಕಿಗೆ ಬಂದಿದೆ.
ಆರೋಗ್ಯ ಮೂಲ ಸೌಕರ್ಯವಿಲ್ಲದ ಕಠೋರ ಸ್ಥಿತಿ ಬಿಂಬಿಸುವ ಘಟನೆ ಬಹಿರಂಗವಾಗಿದೆ. ಹೌದು, ಮಧ್ಯಪ್ರದೇಶದ ಜಬಲ್‌ಪುರದ ದಿಂಡೋರಿಯ ಬಡ ವ್ಯಕ್ತಿಯೊಬ್ಬರು, ಜಬಲ್‌ಪುರ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಆಂಬ್ಯುಲೆನ್ಸ್‌ಗೆ ಪಾವತಿಸಲು ಸಾಧ್ಯವಾಗದ ಕಾರಣ, ತನ್ನ ನವಜಾತ ಶಿಶುವಿನ ಮೃತದೇಹವನ್ನು ಚೀಲದಲ್ಲಿ ಇಟ್ಟುಕೊಂಡು ಬಸ್‌ನಲ್ಲಿ ಪ್ರಯಾಣಿಸಿದ್ದಾರೆ.
ದಿಂಡೋರಿಯ ಗ್ರಾಮದ ನಿವಾಸಿಯಾಗಿರುವ ವ್ಯಕ್ತಿಯ ಪತ್ನಿ ಜಮಾನಿ ಬಾಯಿ ಹೆರಿಗೆ ನೋವಿನ ಹಿನ್ನೆಲೆಯಲ್ಲಿ ದಿಂಡೋರಿ ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದರು. ಹೆರಿಗೆಯ ನಂತರ, ಮಗುವಿನ ಆರೋಗ್ಯದ ಸ್ಥಿತಿ ಹದಗೆಡಲು ಪ್ರಾರಂಭಿಸಿತು. ಮಗುವನ್ನು ಜಬಲ್‌ಪುರ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ನವಜಾಶಿಶು ಮಗು ಸಾವನ್ನಪ್ಪಿದೆ.
ದಿಂಡೋರಿಯ ಗ್ರಾಮಕ್ಕೆ ತಂದೆ ತನ್ನ ಮಗುವಿನ ಶವವನ್ನು ಮನೆಗೆ ಸಾಗಿಸಲು ಆಂಬ್ಯುಲೆನ್ಸ್ ಅಥವಾ ಶವ ವಾಹನವನ್ನು ವ್ಯವಸ್ಥೆ ಮಾಡಲು ಆಸ್ಪತ್ರೆಯ ಅಧಿಕಾರಿಗಳನ್ನು ಸಂಪರ್ಕಿಸಿದರು. ಆದರೆ, ಆಸ್ಪತ್ರೆಯ ಅಧಿಕಾರಿಗಳು ಆ ವ್ಯಕ್ತಿಗೆ ಯಾವುದೇ ಸಹಾಯ ಮಾಡಿಲ್ಲ ಎನ್ನಲಾಗಿದೆ. ಖಾಸಗಿ ಆಂಬ್ಯುಲೆನ್ಸ್ ಅಥವಾ ಶವ ವಾಹನವನ್ನು ಬಾಡಿಗೆಗೆ ಪಡೆಯಲು ಸಾಧ್ಯವಾಗದ ಕಾರಣ, ದಂಪತಿ ಶಿಶುವಿನ ಮೃತ ದೇಹವನ್ನು ತಮ್ಮ ಗ್ರಾಮಕ್ಕೆ ಕೊಂಡೊಯ್ಯಲು ನಿರ್ಧರಿಸಿದರು.
ಆಟೋರಿಕ್ಷಾ ಹಿಡಿದು ಜಬಲ್‌ಪುರ ಬಸ್ ನಿಲ್ದಾಣ ತಲುಪಿದರು. ನಂತರ ಮಗುವಿನ ಶವವನ್ನು ಚೀಲದಲ್ಲಿ ಬಚ್ಚಿಟ್ಟುಕೊಂಡು ಬಸ್ ಹತ್ತಿದ್ದಾರೆ. ಬಸ್ಸಿನಲ್ಲಿ 150 ಕಿ.ಮೀ. ಕ್ರಮಿಸಿದ ಕುಟುಂಬ ತಡರಾತ್ರಿ ದಿಂಡೋರಿ ಬಸ್ ನಿಲ್ದಾಣ ತಲುಪಿತು. ಬಸ್ ನಿಲ್ದಾಣದಲ್ಲಿ ಕುಟುಂಬಸ್ಥರು ತಮ್ಮ ಸಂಬಂಧಿಕರಿಗಾಗಿ ಕಾಯುತ್ತಿದ್ದರು. ಆದರೆ, ಯಾರೂ ಅವರಿಗೆ ಸಹಾಯ ಮಾಡಲು ಮುಂದೆ ಬರಲಿಲ್ಲ.
ಮಗುವಿನ ಸಂಬಂಧಿ ಸೂರಜ್ತಿಯಾ ಬಾಯಿ ಅವರನ್ನು, ಮಗುವಿನ ಶವವನ್ನು ಚೀಲದಲ್ಲಿ ಏಕೆ ಇಟ್ಟುಕೊಂಡಿದ್ದೀರಿ ಎಂದು ವರದಿಗಾರರು ಕೇಳಿದರು. ಅದಕ್ಕೆ ಅವರು, ತಮ್ಮ ಗ್ರಾಮಕ್ಕೆ ಹೋಗಲು ಬೇರೆ ದಾರಿಯಿಲ್ಲ. ವಿಧಿಯಿಲ್ಲದೇ ಬಸ್‌ನಲ್ಲಿ ಪ್ರಯಾಣ ಬೆಳೆಸಬೇಕಾಯಿತು ಎಂದು ಉತ್ತರಿಸಿದರು.