ನಾಸಿಕ್: ಮಹಾರಾಷ್ಟ್ರದ ನಾಸಿಕ್ನಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ.
ಇಲ್ಲಿಯ ಶಿರಡಿ- ಭರವೀರ್ ಹೆದ್ದಾರಿಯಲ್ಲಿ ಭಾನುವಾರ ಮಧ್ಯರಾತ್ರಿ ಕಾರು ದುರಂತದಲ್ಲಿ ನಾಲ್ವರು ಸಾವನ್ನಪ್ಪಿ, ನಾಲ್ವರು ಗಾಯಗೊಂಡಿರುವ ಘಟನೆ ನಡೆದಿದೆ. ರಜಾಕ್ ಅಹ್ಮದ್ ಶೇಖ್, ಸತ್ತಾರ್ ಶೇಖ್ ಲಾಲ್ ಶೇಖ್, ಸುಲ್ತಾನ್ ಸತ್ತಾರ್ ಶೇಖ್, ಫಿಯಾಜ್ ದಗುಭಾಯಿ ಶೇಖ್ ಮೃತರು ಎಂದು ಗುರುತಿಸಲಾಗಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಇನ್ನೋವಾ ಕಾರಿನಲ್ಲಿದ್ದ ಪ್ರಯಾಣಿಕರು ಹಜ್ ಯಾತ್ರೆಗೆಂದು ಮುಂಬೈನಿಂದ ಹೊರಟು ಶಿರಡಿಗೆ ವಾಪಸಾಗುತ್ತಿದ್ದರು. ಭಾನುವಾರ ಮಧ್ಯರಾತ್ರಿ 12 ಗಂಟೆ ಸುಮಾರಿಗೆ ಬಾಳಾಸಾಹೇಬ್ ಠಾಕ್ರೆ ಸಮೃದ್ಧಿ ಹೆದ್ದಾರಿಯಲ್ಲಿ ಸಿನ್ನಾರ್ ತಾಲೂಕಿನ ಖಪ್ರಾಲೆ ಶಿವಾರ್ ಎಂಬಲ್ಲಿ ಭೀಕರ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ರಜಾಕ್ ಅಹ್ಮದ್ ಶೇಖ್, ಸತ್ತಾರ್ ಶೇಖ್ ಲಾಲ್ ಶೇಖ್, ಸುಲ್ತಾನ ಸತ್ತಾರ್ ಶೇಖ್ ಸ್ಥಳದಲ್ಲೇ ಮೃತಪಟ್ಟರೆ, ತೀವ್ರ ಗಾಯಗೊಂಡಿದ್ದ ಫಿಯಾಜ್ ದಗುಭಾಯಿ ಶೇಕ್ರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ವೇಳೆ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ. ಗಾಯಗೊಂಡಿರುವ ಇನ್ನೂ ನಾಲ್ವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಹೆದ್ದಾರಿಯಲ್ಲಿ ಸರಣಿ ಅಪಘಾತ: ಸಮೃದ್ಧಿ ಹೆದ್ದಾರಿಯಲ್ಲಿ ಪದೇ ಪದೇ ಅಪಘಾತಗಳು ಸಂಭವಿಸುತ್ತಲೇ ಇವೆ. ಸಂಚಾರಕ್ಕೆ ಮುಕ್ತವಾದ 100 ದಿನಗಳಲ್ಲಿ 900 ಅಪಘಾತಗಳು ಮತ್ತು 31 ಸಾವು ವರದಿಯಾಗಿವೆ. ವಾಹನಗಳ ಅತಿಯಾದ ವೇಗ, ತಾಂತ್ರಿಕ ದೋಷಗಳು, ಚಾಲಕರು ನಿದ್ರಿಸುವುದು ಮತ್ತು ಲೇನ್ ಶಿಸ್ತು ಪಾಲಿಸದ ಕಾರಣ, ಮಂಗಗಳು, ಕಾಡುಪ್ರಾಣಿಗಳು ಏಕಾಏಕಿ ರಸ್ತೆ ದಾಟುವುದರಿಂದ ಹಲವಾರು ಅವಘಡಗಳು ಸಂಭವಿಸಿವೆ.
ಆಂಧ್ರಪ್ರದೇಶದಲ್ಲಿ 7 ಮಂದಿ ಸಾವು: ರಸ್ತೆಯಲ್ಲೇ ನಿಂತಿದ್ದ ಲಾರಿಗೆ ಕಾರು ಡಿಕ್ಕಿಯಾಗಿ ಮಗು, ಮಹಿಳೆ ಸೇರಿದಂತೆ 7 ಮಂದಿ ದುರ್ಮರಣಕ್ಕೀಡಾದ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ. ಇನ್ನಿಬ್ಬರು ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯಲ್ಲಿ ಈ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಜಿಲ್ಲೆಯ ನಲ್ಲಜರ್ಲಾ ಮಂಡಲದ ಅನಂತಪಲ್ಲಿ ಮೇಲ್ಸೇತುವೆಯಲ್ಲಿ ನಿಂತಿದ್ದ ಲಾರಿಗೆ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದಿದೆ. ಹೈದರಾಬಾದ್‌ನಲ್ಲಿ ನಡೆದ ವಿವಾಹ ಸಮಾರಂಭವನ್ನು ಮುಗಿಸಿಕೊಂಡು ಕಾರಲ್ಲಿದ್ದವರು ಊರಿಗೆ ವಾಪಸ್ ಆಗುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಮೃತಪಟ್ಟವರ ಕುಟುಂಬವು ಮದುವೆ ಸಮಾರಂಭಕ್ಕಾಗಿ ಹೈದರಾಬಾದ್‌ಗೆ ತೆರಳಿತ್ತು. ಮದುವೆಯಲ್ಲಿ ಪಾಲ್ಗೊಂಡು ವಾಪಸ್ ಬರುವಾಗ ರಾಜಮಹೇಂದ್ರಾವರಕ್ಕೆ ತೆರಳಿದರು. ಈ ವೇಳೆ ಪೂರ್ವ ಗೋದಾವರಿ ಜಿಲ್ಲೆಗೆ ಆಗಮಿಸಿದಾಗ ಅವರು ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿದೆ. ನಲ್ಲಜರ್ಲ ಮಂಡಲದ ಅನಂತಪಲ್ಲಿ ರಾಷ್ಟ್ರೀಯ ಹೆದ್ದಾರಿಯ ಸೇತುವೆ ಮೇಲೆ ನಿಂತಿದ್ದ ಲಾರಿಗೆ ಕಾರು ಗುದ್ದಿದೆ. ಪರಿಣಾಮ ಕಾರಿನಲ್ಲಿದ್ದ 8 ಮಂದಿ ಪೈಕಿ 6 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ಮತ್ತೊಬ್ಬರು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಮತ್ತೊಬ್ಬ ವ್ಯಕ್ತಿಯ ಸ್ಥಿತಿ ಚಿಂತಾಜನಕವಾಗಿದೆ.