ಬೆಂಗಳೂರು, ಅ.23-ಬಿಹಾರ ವಿಧಾನಸಭೆಗೆ ಸಾರ್ವತ್ರಿಕ ಚುನಾವಣೆಯ ಸಂದರ್ಭಲ್ಲಿ ಪ್ರಣಾಳಿಕೆ ಬಿಡುಗಡೆ ಮಾಡಿರುವ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು, ಬಿಹಾರದ ಜನತೆಗೆ ಕೊರೊನಾಗೆ ಉಚಿತ ಲಸಿಕೆ ನೀಡುವುದಾಗಿ ಘೋಷಣೆ ಮಾಡಿದ್ದಾರೆ. ಕರ್ನಾಟಕದಲ್ಲಿ ಸಾರ್ವತ್ರಿಕ ಚುನಾವಣೆ ಇಲ್ಲ ಎಂಬ ಕಾರಣಕ್ಕಾಗಿ ನಮ್ಮ ಆರೋಗ್ಯ ಲೆಕ್ಕಕ್ಕಿಲ್ಲವೇ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಟ್ವೀಟರ್‍ನಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಪ್ರಧಾನ ಮಂತ್ರಿ ನರೇಂದ್ರ ಮೋದಿ, ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಮತ್ತು 25 ಮಂದಿ ಬಿಜೆಪಿ ಸಂಸದರನ್ನು ಉಲ್ಲೇಖಿಸಿ ಪ್ರಶ್ನೆಗಳನ್ನು ಎತ್ತಿರುವ ಸಿದ್ದರಾಮಯ್ಯ ಅವರು ಕನ್ನಡಿಗರ ಬಗ್ಗೆ ನಿರ್ಲಕ್ಷ್ಯವೇಕೆ ಎಂದು ಕೇಳಿದ್ದಾರೆ.
ಕರ್ನಾಟಕದಲ್ಲಿ ಸಾರ್ವತ್ರಿಕ ಚುನಾವಣೆ ಇಲ್ಲವೆಂಬ ಕಾರಣಕ್ಕಾಗಿ ಕನ್ನಡಿಗರು ಕೊರೊನಾಗೆ ಉಚಿತ ಔಷಧಿ ಪಡೆಯಬಾರದೆ? ಕೂಡಲೇ ರಾಜ್ಯದ ಬಿಜೆಪಿ ಸಂಸದರು, ಬಿಜೆಪಿ ರಾಜ್ಯಾಧ್ಯಕ್ಷರು ಹಾಗೂ ಮುಖ್ಯಮಂತ್ರಿಯವರು ಕೇಂದ್ರ ಸರ್ಕಾರದ ಮೇಲೆ ಒತ್ತಡ ತಂದು ಕನ್ನಡಿಗರಿಗೂ ಉಚಿತ ಔಷಧಿ ಘೋಷಣೆ ಮಾಡುವಂತೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ಬಿಹಾರದಲ್ಲಿ ಸಾರ್ವತ್ರಿಕ ಚುನಾವಣೆ ಫಲಿತಾಂಶ ಆಧರಿಸಿ ಉಚಿತ ಔಷಧ ಕೊಡುವುದಾಗಿ ಕೇಂದ್ರ ಸಚಿವರು ಹೇಳಿದ್ದಾರೆ. ಸಾಂಕ್ರಾಮಿಕ ಕೊರೊನಾ ರೋಗ, ಮತ ಬ್ಯಾಂಕಿನ ರಾಜಕೀಯಕ್ಕೆ ಬಳಸುವ ವಿಷಯವೇ? ದೇಶದ ಜನರ ಆರೋಗ್ಯದ ಬಗ್ಗೆ ಕೇಂದ್ರ ಸರ್ಕಾರಕ್ಕೆ ಕಾಳಜಿ ಇಲ್ಲವೇ? ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಹೇಳಿಕೆಗೆ ಬಗ್ಗೆ ಪ್ರಧಾನಿ ಅವರು ಏನು ಹೇಳುತ್ತಾರೆ ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಬಿಜೆಪಿ ಅವಕಾಶವಾದಿ ರಾಜಕಾರಣ ಮಾಡುತ್ತಿದೆ. ಕರ್ನಾಟಕದ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಚುನಾವಣೆ ವೇಳೆ ರಾಜ್ಯದ ಜನರಿಗೆ ಸಾಕಷ್ಟು ಭರವಸೆ ಗಳನ್ನು ನೀಡಿದ್ದರು. ಆದರೆ, ಅವುಗಳು ಈಡೇರದಂತೆ ಬಿಜೆಪಿಯಲ್ಲೇ ಸಂಚು ನಡೆಯುತ್ತಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ನಿರ್ಮಲಾ ಸೀತಾರಾಮನ್ ಅವರು ಕರ್ನಾಟಕದಿಂದಲೇ ರಾಜ್ಯಸಭೆಗೆ ಆಯ್ಕೆಯಾಗಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷರಿಗೆ ಧಮ್ ಇದ್ದರೆ, ಅವರದೇ ಪಕ್ಷ ಅಧಿಕಾರದಲ್ಲಿರುವ ಕೇಂದ್ರ ಸಚಿವರ ಮನವೊಲಿಸಿ ಕರ್ನಾಟಕಕ್ಕೂ ಉಚಿತವಾಗಿ ಲಸಿಕೆ ಕೊಡಿಸಿ ಎಂದು ಆಗ್ರಹಿಸಿದ್ದಾರೆ. ಪ್ರಾಣ ರಕ್ಷಣೆಯ ಲಸಿಕೆಯನ್ನು ಬಿಹಾರಕ್ಕೆ ಉಚಿತವಾಗಿ ನೀಡುವುದು. ಕರ್ನಾಟಕಕ್ಕೆ ಇನ್ನೊಂದು ಚುನಾವಣೆ ಬರುವವರೆಗೂ ನೀಡದೇ ಇರುವುದು ಸರಿಯಲ್ಲ ಎಂದು ಕಿಡಿ ಕಾರಿದ್ದಾರೆ.
Laxmi News 24×7