ರಾಯಚೂರು: ಸಿಂಧನೂರು ತಾಲೂಕಿನಲ್ಲಿ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದ್ದು, ತೀವ್ರ ಅಸ್ವಸ್ಥಳಾಗಿದ್ದ ಸಂತ್ರಸ್ತೆ ಸಾವನ್ನಪ್ಪಿರುವ ಘಟನೆ ನಡೆದಿದೆ.
ಮೇ 23 ರಂದು ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ನಾಲ್ಕು ಆರೋಪಿಗಳು ಕೃತ್ಯದಲ್ಲಿ ಭಾಗಿಯಾಗಿದ್ದು, ಓರ್ವನನ್ನು ಬಂಧಿಸಲಾಗಿದೆ. ಇನ್ನುಳಿದವರಿಗಾಗಿ ಶೋಧ ನಡೆಸಲಾಗುತ್ತಿದೆ.
ಜಿಲ್ಲೆಯ ಸಿಂಧನೂರು ತಾಲೂಕಿನಲ್ಲಿ ಮೇ 23 ರಂದು ಈ ಘಟನೆ ಸಂಭವಿಸಿದ್ದು, ತಡವಾಗಿ ಬೆಳಕಿಗೆ ಬಂದಿದೆ. ತಾಡಪತ್ರಿ ಹೊಲೆದು ಜೀವನ ನಡೆಸುತ್ತಿದ್ದ ಗೃಹಿಣಿಯನ್ನು ಒತ್ತಾಯಪೂರ್ವಕವಾಗಿ ಆರೋಪಿ ಮಲ್ಲಪ್ಪ ಗುಂಡಪ್ಪ ಹಾಗೂ ಆತನ ಮೂವರು ಸಹಚರರು ಸೇರಿಕೊಂಡು ಕರೆದೊಯ್ದು ಸಾಮೂಹಿಕವಾಗಿ ಅತ್ಯಾಚಾರ ಮಾಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ತಾಡಪತ್ರಿ ಹೊಲೆಸಿಕೊಂಡು ಬರಲು ಹೋಗುವ ನೆಪದಲ್ಲಿ ಗೃಹಿಣಿ ಜೊತೆ ಆರೋಪಿಗಳು ಸಲುಗೆ ಬೆಳೆಸಿಕೊಂಡಿದ್ದರು. ಇದಾದ ಬಳಿಕ ಹಲವು ಬಾರಿ ಆಕೆಯ ಜೊತೆಗೆ ದೈಹಿಕ ಸಂಪರ್ಕಕ್ಕಾಗಿ ಒತ್ತಾಯಿಸಿದ್ದರು. ಗೃಹಿಣಿ ವಿರೋಧಿಸಿದ್ದಳು. ಆದರೆ, ಮೇ 23 ರಂದು ಆರೋಪಿ ಮಲ್ಲಪ್ಪ ಬೈಕ್ನಲ್ಲಿ ಆಕೆಯನ್ನು ಬಲವಂತವಾಗಿ ಕರೆದುಕೊಂಡು ಹೋಗಿದ್ದ.
ಸಾಮೂಹಿಕ ಅತ್ಯಾಚಾರ: ಮಹಿಳೆಯನ್ನು ಕರೆದೊಯ್ದ ಆರೋಪಿಗಳು ಗ್ರಾಮದ ಕಾಲುವೆ ಬಳಿ ಸಾಮೂಹಿಕ ಅತ್ಯಾಚಾರ ಮಾಡಿ ಬಿಟ್ಟು ಹೋಗಿದ್ದರು. ಗ್ರಾಮದ ವ್ಯಕ್ತಿಯೊಬ್ಬರು ಕಂಡು ಮಹಿಳೆಯ ಪುತ್ರನಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕಾಗಮಿಸಿದ ಕುಟುಂಬಸ್ಥರು, ಮಹಿಳೆಯನ್ನು ಸಿಂಧನೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದರು. ಇದಾದ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೇ ಮೇ 24 ರಂದು ಮಹಿಳೆ ಮೃತಪಟ್ಟಿದ್ದಾಳೆ.
ಮಹಿಳೆ ಹೇಳಿಕೆ: ಸಾವಿಗೂ ಮೊದಲು ಸಂತ್ರಸ್ತ ಮಹಿಳೆ ಆರೋಪಿಗಳ ಬಗ್ಗೆ ಹೇಳಿಕೆ ನೀಡಿದ್ದಾರೆ. ತನ್ನನ್ನು ಆರೋಪಿ ಮಲ್ಲಪ್ಪ ಸೇರಿದಂತೆ ಮೂವರು ಬಲವಂತವಾಗಿ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ ಎಂದು ತಿಳಿಸಿದ್ದರು. ಮಹಿಳೆ ನೀಡಿದ ಹೇಳಿಕೆಯ ಮೇರೆಗೆ ಪುತ್ರ ಸಿಂಧನೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾನೆ.
ಅತ್ಯಾಚಾರ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ನಾಲ್ವರು ಆರೋಪಿಗಳಲ್ಲಿ ಎ1 ಆರೋಪಿ ಮಲ್ಲಪ್ಪ ಎಂಬಾತನನ್ನು ವಶಕ್ಕೆ ಪಡೆದು, ನಾಪತ್ತೆಯಾದ ಇನ್ನೂ ಮೂವರಿಗಾಗಿ ಜಾಲ ಬೀಸಿದ್ದಾರೆ.